ರಾಣೆಬೆನ್ನೂರು, ಆ.2- ಇಲ್ಲಿಯ ಮಾರುತಿ ನಗರದ ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡ ಏಳು ಜನರಲ್ಲಿ ಬುಧವಾರ ಓರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ಶಂಭುಲಿಂಗನಗೌಡ ದ್ಯಾವಣ್ಣನವರ (42) ಮೃತ ದುರ್ದೈವಿ.
ಮಂಗಳವಾರ ಸಂಭವಿಸಿದ ಆಕಸ್ಮಿಕ ಘಟನೆಯಲ್ಲಿ ಈತ ಗಾಯಗೊಂಡಿದ್ದ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ಶಂಭುಲಿಂಗಪ್ಪ ಕುಟುಂಬಸ್ಥರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ನಗರದ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಹೊನ್ನಪ್ಪ ದ್ಯಾಮನಗೌಡ್ರ ಮಾತನಾಡಿ, ಅವಘಡದಲ್ಲಿ ಅಸುನೀಗಿದ ಶಂಭುಲಿಂಗಪ್ಪನ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸದ್ಯ ಸಾವು ಬದುಕಿನ ಮಧ್ಯ ಹೋರಾಡುತ್ತಿರುವವರ ಆಸ್ಪತ್ರೆಯ ಖರ್ಚನ್ನು ಶ್ರೀಕಾಂತ ಮಾಲೀಕತ್ವದ ಸ್ಟಾರ್ಕ್ ಕ್ಯಾಂಡಲ್ ಘಟಕದ ಮಾಲೀಕರು ಭರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಗುರುಬಸವರಾಜ ಮಾತನಾಡಿ, ಇದರ ಕುರಿತು ಶಾಸಕ ಪ್ರಕಾಶ ಕೋಳಿವಾಡ ರವರ ಜೊತೆ ಸಮಾಲೋಚಿಸಿದ್ದೇನೆ. ನಮ್ಮ ಕಚೇರಿಯಿಂದ ಸಂಬಂಧಿಸಿದ ದಾಖಲೆ ಪತ್ರಗಳನ್ನು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಕಳುಹಿಸಿ ಇಂತಹ ಅವಘಡಗಳಿಗೆ ಎಷ್ಟು ಪರಿಹಾರ ನೀಡಬೇಕು ಅದನ್ನು ಸಿಎಂ ಪರಿಹಾರ ನಿಧಿಯಿಂದ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಆಗ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರಮುಖರಾದ ವಿಜಯ್ ಬಳ್ಳಾರಿ, ದ್ಯಾಮನಗೌಡ ಪೂಜಾರ, ಮಾಲತೇಶ ದೊಡ್ಡಮನಿ, ಉಜ್ಜಪ್ಪ ದೇವರಗುಡ್ಡ, ಅಣ್ಣಪ್ಪ ದ್ಯಾಮನಗೌಡ್ರ, ಶಿವಣ್ಣ ಶಂಕರಗೌಡ ಪಾಟೀಲ, ಮಾಲತೇಶ ಹೊಳಿಯಮ್ಮನವರ, ರಾಕು ಯಳವಳಿ, ಶಿವಾನಂದ ದ್ಯಾಮನಗೌಡ್ರ, ರಾಮಣ್ಣ ದ್ಯಾಮನಗೌಡ್ರ, ಮಾಲತೇಶ ಆಲದಗೇರಿ, ರಾಜು ಶಿವಕ್ಕನವರ, ಬಸವರಾಜ ವಡ್ಡರಹಳ್ಳಿ, ಸಂಪತ್ ನಾಗರಹಳ್ಳಿ, ಮಲ್ಲಿಕಾರ್ಜುನ ಬಿದರಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.