ಅಜ್ಜಂಪುರ ಶೆಟ್ರು ಪ್ರತಿಭಾ ಪ್ರತಿಷ್ಠಾನದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
ದಾವಣಗೆರೆ, ಆ.1- ಜೀವನದಲ್ಲಿ ವಿದ್ಯಾರ್ಥಿಗಳು ಕಷ್ಟಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬರೂ ಸಹ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ, ಸಾಧನೆ ಮಾಡಿರುತ್ತಾರೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ (ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪ) ಅಜ್ಜಂಪುರ ಶೆಟ್ರು ಪ್ರತಿಭಾ ಪ್ರತಿಷ್ಠಾನದಿಂದ ಲಿಂ. ಸಿದ್ದೇಶ್ವರ ಸ್ವಾಮಿಗಳ ಸ್ಮರಣಾರ್ಥ ಮೊನ್ನೆ ಹಮ್ಮಿಕೊಂಡಿದ್ದ 18 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಭಾ ಪುರಸ್ಕಾರದಂತಹ ಸಮಾಜಮುಖಿ ಕಾರ್ಯ ಕ್ರಮಗಳು ದೀಪದಿಂದ ದೀಪ ಹಚ್ಚಿದಂತೆ, ನಿರಂತರವಾಗಿ ನಡೆಯಬೇಕು. ಉಳ್ಳವರು ಕಷ್ಟದಲ್ಲಿರುವವರನ್ನು ಗುರುತಿಸಿ, ನೀಡುವ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಗೆ ನವಚೈತನ್ಯ ತಂದುಕೊಡುವ ಜೊತೆಗೆ ಸಮಾಜ ಸೇವೆಯ ಪ್ರೇರಣೆಯನ್ನೂ ಸಹ ನೀಡಲಿದೆ ಎಂದರು.
ಬೆಂಗಳೂರಿನ ಉದ್ಯಮಿ ಎನ್.ಎಂ. ಶಿವಕುಮಾರ್ ಮಾತನಾಡಿ, ಲಿಂ. ಸಿದ್ದೇಶ್ವರ ಸ್ವಾಮೀಜಿಯವರ ಸರಳ ಜೀವನ ಎಲ್ಲರಿಗೂ ಆದರ್ಶವಾಗಿದೆ. ಅವರ ಪ್ರವಚನಗಳು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ವೈದ್ಯ ಡಾ. ಎಸ್.ಎಂ. ಎಲಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಅವರು ಅತ್ಯಂತ ಸರಳ ಹಾಗೂ ಆದರ್ಶದ ಬದುಕು ನಡೆಸಿದವರು. ಅವರ ಜೀವನ ಎಲ್ಲರಿಗೂ ಆದರ್ಶವಾಗಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದರು.
ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ ಮಾಸ್ತರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಜ್ಜಂಪುರ ಶೆಟ್ರು ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಅಜ್ಜಂಪುರ ಶೆಟ್ರು ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪುರಸ್ಕಾರ ನೀಡಲಾಯಿತು.