ಶಿಕ್ಷಣಕ್ಕೆ ಆದ್ಯತೆ ನೀಡದೇ ಮಕ್ಕಳ ಭವಿಷ್ಯ ಸಾಧ್ಯವಿಲ್ಲ

ಶಿಕ್ಷಣಕ್ಕೆ ಆದ್ಯತೆ ನೀಡದೇ ಮಕ್ಕಳ ಭವಿಷ್ಯ ಸಾಧ್ಯವಿಲ್ಲ

ಹರಿಹರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಭಿಮತ 

ಹರಿಹರ, ಆ. 1 – ಸಮಾಜ ಸದೃಢ ವಾಗಿರಲು ಶಿಕ್ಷಣ ಅಗತ್ಯ. ಆದರೆ, ಬಜೆಟ್‍ನಲ್ಲಿ ಶಿಕ್ಷಣಕ್ಕೆ ಸರ್ಕಾರ ಮೀಸಲಿಟ್ಟಿರುವ 29 ಸಾವಿರ ಕೋಟಿ ರೂ. ಹಣ ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಾಲದು ಎಂದು ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.

ನಗರದ ಎಸ್.ಜೆ.ವಿ.ಪಿ. ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಮತ್ತು ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಸಮಾರಂಭ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟರೆ ಸಮಾಜದಲ್ಲಿ ಬುದ್ಧಿವಂತರ ಸಂಖ್ಯೆ ಹೆಚ್ಚಾಗುತ್ತದೆ. ಶಿಕ್ಷಣಕ್ಕೆ ಆದ್ಯತೆ ನೀಡದೇ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗದು. ಸರ್ಕಾರ ಪಠ್ಯ ಬದಲಾವಣೆ ಮಾಡುವ ಬದಲು ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕೊಟ್ಟರೆ, ಮಕ್ಕಳಿಗೆ ಹೆಚ್ಚಿನ ಜ್ಞಾನ ಸಿಗುತ್ತದೆ ಎಂದರು.

ಸಿದ್ದರಾಮಯ್ಯ ಸರ್ಕಾರದ ಸಂಪುಟ ದಲ್ಲಿ 12 ಸಚಿವರು ಎಸ್.ಎಸ್.ಎಲ್.ಸಿ. ಓದಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣಕ್ಕೆ ಮಹತ್ವ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆ ಓದಿದವರು ಸಚಿವರಾಗಲಿ ದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದರು. ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿ, ನಮಗೆ 14 ಎಂ.ಎಲ್.ಸಿ. ಯವರ ಬೆಂಬಲವಿದ್ದರೂ ಸಹ ಶಿಕ್ಷಣ ಇಲಾಖೆಯ ಕೆಳ ಹಂತದ ನೌಕರರು ಕಿರುಕುಳ ಕೊಡುತ್ತಿದ್ದಾರೆ. ಶಿಕ್ಷಕರು ಬಹಳಷ್ಟು ನೊಂದುಕೊಂಡು ಕೆಲಸ ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘವು ಸದಾ ಶಿಕ್ಷಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಸುತ್ತಿದೆ ಎಂದರು.

ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ ಮಾತನಾಡಿ, ಶಿಕ್ಷಕರ ಜಾಗೃತಿ ಹಾಗೂ ಬಲಪಡಿಸುವ ದೃಷ್ಟಿಯಿಂದ ಕಾರ್ಯಾಗಾರ ಮಾಡಲಾಗುತ್ತಿದೆ. ಈ ಬಾರಿ ಮುಖ್ಯ ಶಿಕ್ಷಕರ ಜೊತೆ ಶಿಕ್ಷಕರನ್ನೂ ಗೌರವಿಸಲಾಗುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಈಶಪ್ಪ ಬೂದಿಹಾಳ ವಹಿಸಿದ್ದರು. ಹಗರಿಬೊಮ್ಮನಹಳ್ಳಿ ಆರ್.ಬಿ. ಗುರುಬಸವರಾಜ್ ಉಪನ್ಯಾಸ ನೀಡಿದರು. ಶೇ 100 ರಷ್ಟು ಫಲಿತಾಂಶ ಪಡೆದ ಶಾಲಾ ಶಿಕ್ಷಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಆರ್. ತಿಪ್ಪೇಶಪ್ಪ, ಬಿಇಓ ಎಂ. ಹನುಮಂತಪ್ಪ , ಎಸ್.ಜೆ.ವಿ. ಪಿ. ಕಾಲೇಜು ಕಾರ್ಯದರ್ಶಿ ಆರ್.ಟಿ. ಪ್ರಶಾಂತ ದುಗ್ಗತ್ತಿಮಠ, ಎಸ್. ಕೃಷ್ಣಮೂರ್ತಿ ಶೆಟ್ಟಿ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ದಾವಣಗೆರೆ ಎಸ್. ದ್ವಾರಕೀಶ್, ಜಯಣ್ಣ, ಉಮೇಶ್ ಬಿ.ಪಿ., ಎನ್.ಪಿ ಮಂಜುಳಾ,  ಕೆ. ಆರ್. ವಿಶ್ವನಾಥ್, ಕೃಷ್ಣಪ್ಪ ಭಜಂತ್ರಿ, ರೇವಣಸಿದ್ದಪ್ಪ ಅಂಗಡಿ, ಹೆಚ್. ‌ಹಾಲಪ್ಪ, ಲಿಂಗರಾಜ್, ಡಿ.ಟಿ. ತಿಪ್ಪಣ್ಣ ರಾಜ್, ರಿಯಾಜ್ ಆಹ್ಮದ್, ಬಿ‌.ಬಿ.ರೇವಣನಾಯ್ಕ್, ನಾಗರಾಜ್ ಭಾನುವಳ್ಳಿ, ಪದ್ದಪ್ಪ ಬಿ.ಎಸ್. ಪ್ರಭಾಕರ್, ಶ್ರೀಧರಮಯ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!