ಕಾಡುಹಂದಿಗಳ ದಾಳಿ : ಬೆಳೆ ನಷ್ಟ ಪರಿಹಾರ ನೀಡಲು ರೈತರ ಮನವಿ

ಕಾಡುಹಂದಿಗಳ ದಾಳಿ : ಬೆಳೆ ನಷ್ಟ ಪರಿಹಾರ ನೀಡಲು ರೈತರ ಮನವಿ

ಹರಪನಹಳ್ಳಿ, ಆ.1- ಕಾಡುಹಂದಿ ಗಳ ದಾಳಿಯಿಂದ  ಬೆಳೆ ನಷ್ಟವಾಗಿದ್ದು, ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ, ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದ ರೈತರು ಪಟ್ಟಣದಲ್ಲಿರುವ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪನವರಿಗೆ ಮನವಿ ಸಲ್ಲಿಸಿದರು.

 ಪ್ರಗತಿ ಪರ ರೈತ ಕೆ.ರಾಮಪ್ಪ ಮಾತನಾಡಿ, ಗ್ರಾಮದಿಂದ 50ಕ್ಕೂ ಹೆಚ್ಚು ರೈತರು ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿ, ಅಧಿಕಾರಿಗಳಿಗೆ ಕಳೆದ ಒಂದು ತಿಂಗಳಿನಿಂದ ಗ್ರಾಮದ ಅನೇಕ ರೈತರ ನೂರಾರು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ, ಶೇಂಗಾ ಸೇರಿದಂತೆ, ಇತರೆ ಬೆಳೆಗಳನ್ನು ರೈತರು ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ ಗ್ರಾಮವು ಗುಡ್ಡಗಾಡು ಪ್ರದೇಶ ಹೊಂದಿದ್ದು, ರೈತರ ಜಮೀನುಗಳಿಗೆ ರಾತ್ರಿ ವೇಳೆ ಹಲವಾರು ಕಾಡು ಹಂದಿಗಳು ಗುಂಪುಕಟ್ಟಿಕೊಂಡು ಬಂದು, ಬಿತ್ತನೆ ಮಾಡಿದ ಬೀಜಗಳನ್ನು ಹಾಗೂ ಬೆಳೆಯನ್ನು ಹಾನಿಗೀಡುಮಾಡುತ್ತಿವೆ. ಈ ಬಗ್ಗೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ತಾವುಗಳು ಅರಣ್ಯ ಇಲಾಖೆಯಿಂದ ರೈತರಿಗಾದ ನಷ್ಟವನ್ನು ಪರಿಹಾರದ ರೂಪದಲ್ಲಿ ನೀಡಬೇಕು ಮತ್ತು ರೈತರ ಬೆಳೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ವಲಯ ಅರಣ್ಯಾಧಿಕಾರಿ ಮಲ್ಲಪ್ಪ ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿ,  ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳು ಬರದಂತೆ ರಾತ್ರಿ ಪಾಳ್ಯದಲ್ಲಿ ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ಭೀಮಪ್ಪ, ಪರುಶಪ್ಪ, ಮಲ್ಲಪ್ಪ, ರಾಜಪ್ಪ, ಮಂಜುನಾಥ, ಪಿ. ವೀರಣ್ಣ, ಹುಚ್ಚಪ್ಪ, ನಾಗರಾಜ್, ಹಾಲೇಶ್ ಸೇರಿದಂತೆ ಕಣಿವಿಹಳ್ಳಿ ಗ್ರಾಮಸ್ಥರು ಇದ್ದರು.

error: Content is protected !!