ಧೂಳೆಹೊಳೆ : ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸಿರಿಗೆರೆ ನಾಗನಗೌಡ್ರು ಕರೆ
ಮಲೇಬೆನ್ನೂರು, ಜು. 31- ಜನಮಾನಸದಲ್ಲಿ ಸದಾ ಉಳಿಯುವಂತೆ ಸೇವೆ ಸಲ್ಲಿಸಿದರೆ ಶಿಕ್ಷಕ ವೃತ್ತಿ ಸಾರ್ಥಕವಾಗುತ್ತದೆ ಎಂದು ಹಿರಿಯ ಮುತ್ಸದ್ಧಿ ಹಾಗೂ ಧೂಳೆಹೊಳೆಯ ಜಿಎಂಸಿಜಿ ಪ್ರೌಢಶಾಲೆಯ ಉಪಾಧ್ಯಕ್ಷ ಸಿರಿಗೆರೆ ನಾಗನಗೌಡ್ರು ಅಭಿಪ್ರಾಯಪಟ್ಟರು.
ಅವರು ಸೋಮವಾರ ಧೂಳೆಹೊಳೆ ಗ್ರಾಮದ ಜಿಎಂಸಿಜಿ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಹಿಂದಿ ಭಾಷಾ ಪಂಡಿತರಾದ ಕೆ.ಎಂ. ಗುರುಬಸಯ್ಯ ಅವರಿಗೆ ಬೀಳ್ಕೊಡುಗೆ ಮತ್ತು ಶಾಲೆಯಲ್ಲಿ ಇದುವರೆಗೆ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 38 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಗುರುಬಸಯ್ಯ ಅವರು ತಮ್ಮ ಅತ್ಯುತ್ತಮ ಸೇವೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆಂಬುದಕ್ಕೆ ಇವತ್ತಿನ ಈ ಅಭೂತಪೂರ್ವ ಕಾರ್ಯಕ್ರಮವೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತರಾಗಿರುವ ನೀಲನಗೌಡ ಮತ್ತು ಗುರುಬಸಯ್ಯ ಅವರು ಮನೆಯಲ್ಲಿರದೆ ನಮ್ಮ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ತಮ್ಮ ಸೇವೆ ಮುಂದುವರೆಸಬೇಕೆಂದು ನಾಗನಗೌಡ್ರು ಮನವಿ ಮಾಡಿದರು.
ಶಾಲೆಯ ಸದಸ್ಯ ಸಿರಿಗೆರೆಯ ಎಂ.ಜಿ. ಪರಮೇಶ್ವರಗೌಡ ಮಾತನಾಡಿದರು.
ನಿವೃತ್ತ ಹಿರಿಯ ಶಿಕ್ಷಕ ಜಿ. ನೀಲನಗೌಡ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರವಾಗಿದ್ದು, ಗುರು-ಹಿರಿಯರನ್ನು ಗೌರವಿಸುವ ಗುಣವನ್ನು ಹಳೆ ವಿದ್ಯಾರ್ಥಿಗಳನ್ನು ನೋಡಿ ಇಂದಿನ ಯುವ ಜನಾಂಗ ಕಲಿತುಕೊಳ್ಳ ಬೇಕೆಂದರು. ಜನ್ಮ ಕೊಟ್ಟ ತಂದೆ, ತುತ್ತು ಕೊಟ್ಟ ತಾಯಿ, ಬದುಕು ಕೊಟ್ಟ ಭಗವಂತ, ವಿದ್ಯೆ ಕಲಿಸಿದ ಗುರು ಮತ್ತು ಕನಸು ಕಟ್ಟಿಕೊಟ್ಟ ಸಂಗಾತಿಗಳನ್ನು ಎಂದಿಗೂ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ನೀಲನಗೌಡರು ಕಿವಿಮಾತು ಹೇಳಿದರು.
ಶಾಲೆಯ ಇನ್ನೋರ್ವ ಸದಸ್ಯ ಹಾಗೂ ತಾ.ಪಂ. ಮಾಜಿ ಅಧ್ಯಕ್ಷ ಕೆ.ಜಿ. ನಿಜಲಿಂಗಪ್ಪ, ಶಾಲೆಯ ಹಳೆಯ ವಿದ್ಯಾರ್ಥಿ ಗಳಾದ ಶಿಕ್ಷಕಿ ಮಂಗಳಾ, ಶಿಕ್ಷಕ ಪಕ್ಕೀರಪ್ಪ ಮಾತನಾಡಿದರು.
ಈ ವೇಳೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸೇರಿ ನಿವೃತ್ತಿ ಹೊಂದಿದ ಗುರುಬಸಯ್ಯ ಅವರಿಗೆ ತಮ್ಮ ಕೈಲಾದ ನೆನಪಿನ ಕಾಣಿಕೆ ನೀಡಿ, ಕಾಲಿಗೆ ನಮಸ್ಕರಿಸಿದ ದೃಶ್ಯ ಎಲ್ಲರ ಕಣ್ತುಂಬಿ ಬರುವಂತೆ ಇತ್ತು.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಾಲೆಯ ಸದಸ್ಯ ಹುಚ್ಚಪ್ಪ ಮಾಸ್ತರ್, ಕಮಲಾಪುರದ ಈಶ್ವರಪ್ಪ, ಡಿ.ಪಿ. ವಿರೂಪಾಕ್ಷಪ್ಪ ಗೌಡ್ರು, ಕೆ.ಜಿ. ತಿಪ್ಪೇರುದ್ರಗೌಡ, ಟಿ. ರಾಮಪ್ಪ ವೇದಿಕೆಯಲ್ಲಿದ್ದರು.ಶಾಲಾ ಮುಖ್ಯ ಶಿಕ್ಷಕ ಹಾಗೂ ತಾ. ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಸಂತೋಷ್ ನಿರೂಪಿಸಿದರೆ, ಶಿಕ್ಷಕ ಜಿ. ಮಲ್ಲಪ್ಪ ವಂದಿಸಿದರು.