ದಾವಣಗೆರೆ, ಜು. 31- ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಶೌಕತ್ ಅಲಿ (38) ಹಾಗೂ ಆರೀಫ್ ವುಲ್ಲಾ (26) ಎಂಬ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, 4 ಎಮ್ಮೆ, 6 ಕರುಗಳು, 2 ಹಸುಗಳು ಹಾಗೂ 1 ಎಮ್ಮೆ ಕರು ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಮಧ್ಯಾಹ್ನ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ
ಲಾರಿಯಲ್ಲಿ ಜಾನುವಾರುಗಳ್ನು ತುಂಬಿಕೊಂಡು ಬೆಂಗಳೂರು ಕಡೆ ಹೋಗುತ್ತಿರುವ ಮಾಹಿತಿ ಬಂದ ಕಾರಣ, ಹದಡಿ ಅಂಡರ್ ಬ್ರಿಡ್ಜ್ ಬಳಿ ವಾಹನ ತಪಾಸಣೆ ಮಾಡಲಾಗಿದೆ.
ಈ ವೇಳೆ ವಿಚಾರಣೆ ನಡೆಸಿದಾಗ ಲಾರಿ ಚಾಲಕನ್ನು ಜಾನುವಾರುಗಳನ್ನು ಚಿನ್ನಗಿರಿಯಿಂದ ಹೊರ ರಾಜ್ಯಕ್ಕೆ ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದು, ಜಾನುವಾರುಗಳ ಖರೀದಿಸಿದ್ದಕ್ಕೆ
ಹಾಗೂ ಸಾಗಿಸುವುದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ,
ಪರವಾನಗಿ ಇಲ್ಲದೆ ಜಾನುವಾರುಗಳಿಗೆ ಆಹಾರ ನೀರಿನ ವ್ಯವಸ್ಥೆ ಹಾಗೂ ಗಾಳಿ ಬೆಳಕಿನ ವ್ಯವಸ್ಥೆಯನ್ನೂ ಮಾಡದೆ ಹಿಂಸೆಯಾಗುವಂತೆ ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.