ಮಲ್ಲಾಡಿಹಳ್ಳಿಯಲ್ಲಿ ಇಂದಿನಿಂದ ಪುಣ್ಯಾರಾಧನೆ

ಮಲ್ಲಾಡಿಹಳ್ಳಿಯಲ್ಲಿ ಇಂದಿನಿಂದ ಪುಣ್ಯಾರಾಧನೆ

ಮಲ್ಲಾಡಿಹಳ್ಳಿ, ಜು.31- ಯೋಗ, ಆಯುರ್ವೇದ ಮತ್ತು ಶಿಕ್ಷಣಕ್ಕೆ ಪ್ರಸಿದ್ಧವಾದ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸ್ಥಾಪಕರಾದ ವ್ಯಾಯಾಮ ಮೇಷ್ಟ್ರು, ಅಭಿನವ ಧನ್ವಂತರಿ, ತಿರುಕ ನಾಮಾಂಕಿತ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಅವರ ಜೊತೆಗೂಡಿ ಬಡವರ, ದೀನ, ದಲಿತರ ಹಾಗೂ ಹಿಂದುಳಿದ ವರ್ಗದವರ ಏಳ್ಗೆಗಾಗಿ ಉತ್ತಮ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಕಾರಣರಾದ ಶ್ರೀ ಸೂರುದಾಸ್‍ಜೀ ಸ್ವಾಮೀಜಿದ್ವಯರ ಪುಣ್ಯಾರಾಧನೆಯು ಆಗಸ್ಟ್ 1 ರಿಂದ 3 ರವರೆಗೆ ನಡೆಯಲಿದೆ ಎಂದು ಅನಾಥ ಸೇವಾಶ್ರಮದ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ತಿಳಿಸಿದ್ದಾರೆ. 

ಎಲ್ಲ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಕ್ಷೇಮಪಾಲಕರುಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಆಗಸ್ಟ್ 1ರಿಂದ 3ರವರೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಕ್ರಮಗಳು ನಡೆಯಲಿವೆ. ದಿನಾಂಕ 1-8-2023ರಂದು ಶ್ರೀ ಸೂರುದಾಸ್‍ಜೀ ಸ್ವಾಮೀಜಿಯವರ ಪುಣ್ಯಾರಾಧನೆ ಹಾಗೂ ಮಂದಿರದ ಶತ ರುದ್ರಾಭಿಷೇಕ ನಡೆಯಲಿದೆ. 

ಆಗಸ್ಟ್ 1 ಮತ್ತು 2 ರಂದು ಶ್ರೀ ರಾಘವೇಂದ್ರ ಸ್ವಾಮೀಜಿಯವರ ಕೊಡುಗೆ ಕುರಿತಂತೆ ಶಾಲಾ-ಕಾಲೇಜುಗಳಿಗೆ ಭಾಷಣ ಸ್ಪರ್ಧೆ ಮತ್ತು ಶ್ರೀ ರಾಘವೇಂದ್ರ ಸ್ವಾಮೀಜಿ ರಚಿತ ಭಕ್ತಿಗೀತೆಗಳ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. 

ದಿನಾಂಕ 2 ರಂದು ಮಧ್ಯಾಹ್ನ 2.30ಗಂಟೆಗೆ ಬೆಂಗ ಳೂರಿನ ಎಚ್.ಎಸ್.ಪ್ರಭಾಕರ್ ಅವರಿಂದ ಸ್ವಾಮೀಜಿ ದ್ವಯರ ಕುರಿತು ನುಡಿ ನಮನ ಕಾರ್ಯಕ್ರಮ, ದಿನಾಂಕ 3 ರ ಬೆಳಿಗ್ಗೆ 10 ಕ್ಕೆ ಅನಾಥ ಸೇವಾಶ್ರಮದ ಭಕ್ತರಿಂದ ಭಜನಾ ಕಾರ್ಯಕ್ರಮ ಹಾಗೂ ಹೋಮ, ಹವನಾದಿಗಳು ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ, ಉದ್ಯಮಿ ಕೆ.ನಾಗರಾಜ್, ವಿಶ್ವಸ್ತ ಸಮಿತಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಆರ್ಥಿಕ ತಜ್ಞ ಹಾಗೂ ಖಜಾಂಚಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ವಿಶ್ವಸ್ತರು ಮತ್ತು ಶಿಕ್ಷಣ ತಜ್ಞರಾದ ಪ್ರೊ.ಕೆ.ಇ.ರಾಧಾಕೃಷ್ಣ, ವಿಶ್ವಸ್ತರಾದ ಕೆ.ಡಿ.ಬಡಿಗೇರ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

error: Content is protected !!