ಶಿಥಿಲಗೊಂಡ ಮನೆಗಳ ಸರ್ವೆ

ಶಿಥಿಲಗೊಂಡ ಮನೆಗಳ ಸರ್ವೆ

ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಡಿಸಿ ವೆಂಕಟೇಶ್ ಸೂಚನೆ

ಮಲೇಬೆನ್ನೂರು, ಜು. 31- ಮಳೆಯಿಂದಾಗಿ ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ವಾಸಿಸುವ ಮನೆಗಳ ಬಗ್ಗೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ಅವರು ಸೋಮವಾರ ಕುಂಬಳೂರು ಗ್ರಾಮದಲ್ಲಿ ಇತ್ತೀಚೆಗೆ ಮನೆ ಗೋಡೆ ಕುಸಿದು ಬಿದ್ದು ಸಾವನ್ನಪ್ಪಿದ ಸ್ಪೂರ್ತಿ ಮನೆಗೆ ಭೇಟಿ ನೀಡಿ ಮಗುವಿನ ತಂದೆ ಕೆಂಚಪ್ಪ ತಾಯಿ ಲಕ್ಷ್ಮಿದೇವಿ ಅಜ್ಜ ರಾಮಚಂದ್ರ ಅವರುಗಳಿಗೆ ಸಾಂತ್ವನ ಹೇಳಿ, ಬಿದ್ದಿರುವ ಮನೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಗಸ್ಟ್ ತಿಂಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಶಿಥಿಲಗೊಂಡಿರುವ ಮತ್ತು ಹಳೆಯ ಮನೆಗಳಲ್ಲಿ ವಾಸಿಸುವ ಜನರು ಎಚ್ಚರವ ಹಿಸಬೇಕೆಂದು ಮತ್ತು ಈ ನಿಟ್ಟಿನಲ್ಲಿ ಗ್ರಾ.ಪಂ. ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಡಿಸಿ ಹೇಳಿದರು. ಗೋಡೆ ಕುಸಿದು ಬಿದ್ದು ಸಾವನ್ನಪ್ಪಿರುವ ಸ್ಫೂರ್ತಿ ಮಗುವಿನ ಕುಟುಂಬದವರಿಗೆ ಈಗಾಗಲೇ 5 ಲಕ್ಷ ರೂ. ಪರಿಹಾರದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು,  ಮನೆ ಹಾನಿಗೆ ಪ್ರಕೃತಿ ವಿಕೋಪದಡಿ 1.20 ಲಕ್ಷ ರೂ. ಮಂಜೂರು ಮಾಡಿದ್ದೇವೆ. ಜೊತೆಗೆ ಗ್ರಾ.ಪಂ.ನಿಂದಲೂ ನರೇಗಾ ಯೋಜನೆಯಡಿ ನೆರವು ನೀಡುವಂತೆ ಸ್ಥಳೀಯ ಗ್ರಾ.ಪಂ.ಗೆ ಸೂಚನೆ ನೀಡಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಶ್ರೀಮತಿ ದುರ್ಗಾಶ್ರೀ, ನೂತನ ತಹಶೀಲ್ದಾರ್ ಗುರುಬಸವರಾಜ್, ಉಪ ತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕರಾದ ಆನಂದ್, ಸಮೀರ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್, ಗ್ರಾ.ಪಂ. ಕಾರ್ಯದರ್ಶಿ ರಾಜಕುಮಾರ್, ಗ್ರಾ.ಪಂ. ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ, ಗ್ರಾ.ಪಂ. ಕಣ್ಣಾಳ್ ನಾಗೇಂದ್ರ, ತಾ.ಪಂ. ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಹಾಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಂ.ಹೆಚ್. ಪರಮೇಶ್ವರಪ್ಪ, ಕಡೇಮನೆ ಪುಟ್ಟಪ್ಪ, ಎಂ. ವಾಸುದೇವಮೂರ್ತಿ, ಕೆ.ಪಿ. ಗಂಗಾಧರ್, ಎ. ಆರೀಫ್ ಅಲಿ ಮತ್ತು ಮಲ್ಲನಾಯ್ಕನಹಳ್ಳಿ ಯುವರಾಜ್ ಈ ವೇಳೆ ಹಾಜರಿದ್ದರು.

ಗ್ರಾಮ ಒನ್‌ಗೆ ಭೇಟಿ : ಗ್ರಾಮದಲ್ಲಿರುವ ಗ್ರಾಮ ಒನ್‌ಗೆ ದಿಢೀರ್ ಭೇಟಿ ನೀಡಿದ ಡಿಸಿ, ಎಸಿ ಅವರು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪರಿಶೀಲಿಸಿದರು.

ಈ ವೇಳೆ ಕೇಂದ್ರದಲ್ಲಿ ಗೃಹಲಕ್ಷ್ಮಿ ನೋಂದಣಿಗೆ ಹಣ ಕೇಳಿದರೆ ಪೊಲೀಸ್ ಠಾಣೆಗೆ ತಿಳಿಸುವಂತೆ ಹಾಕಿದ ಸೂಚನೆ ನೋಡಿ  ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ರಸ್ತೆ ಕಾಮಗಾರಿ ಕಳಪೆ ಆಗಿರುವುದನ್ನು ವೀಕ್ಷಿಸಿ, ಕೂಡಲೇ ಸರಿಪಡಿಸುವಂತೆ ಡಿಸಿ ಅವರು ಗ್ರಾ.ಪಂ. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

error: Content is protected !!