ದಾವಣಗೆರೆ, ಜು.30-ಮಧುಮೇಹ ಎಂಬುದು ವಿಶ್ವಾದ್ಯಂತ ಕೋಟಿ ಜನರನ್ನು ಕಾಡುವ ರೋಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ಮತ್ತು ವಸಡಿನ ಆರೋಗ್ಯದ ಸಂಬಂಧದ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದೆ ಎಂದು ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಪೆರಿಯೋಡಾಂಟಿಕ್ಸ್ ವಿಭಾಗದ ಉಪನ್ಯಾಸಕರಾದ ಡಾ. ನೀತು ಸಿ. ಅಣ್ಣಿಗೇರಿ ತಿಳಿಸಿದ್ದಾರೆ.
ಮಧುಮೇಹ ಮತ್ತು ವಸಡಿನ ದ್ವಿದಿಕ್ಕಿನ ಸಂಬಂಧಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದೆ. ಅಂದರೆ ಮಧುಮೇಹದ ತೊಡಕುಗಳಲ್ಲಿ 6 ನೇ ಸ್ಥಾನ ಪೆರಿಯೋಡಾಂಟೈಟಿಸ್ ಆಗಿತ್ತದೆ.ಮಧುಮೇಹ ಇರುವವರಲ್ಲಿ ವಸಡಿನ ಆರೋಗ್ಯ ಕೆಡುವುದು ಹಾಗೂ ಪೆರಿಯೋಡಾಂಟೈಟಿಸ್ ಹಾಗೂ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುವುದು ಕಂಡುಬಂದಿದೆ.
ಇದು ಒಂದು ಚಕ್ರದಂತೆ ಸಾಗುತ್ತದೆ. ಒಂದು ಹೆಚ್ಚಾದಲ್ಲಿ ಇನ್ನೊಂದು ಹೆಚ್ಚಾಗಿ ಪರಿಪೂರ್ಣ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಆದ್ದರಿಂದ ವಸಡು ಆರೋಗ್ಯ ಸಂರಕ್ಷಣೆ, ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಅತ್ಯಂತ ಪರಿಣಾಮಕಾರಿ ಆಗಿರುತ್ತದೆ.ಇದೇ ನಿಟ್ಟಿನಲ್ಲಿ `ಬಾಯಿ ನೈರ್ಮಲ್ಯ ದಿನ’ ವನ್ನು ಆಗಸ್ಟ್ 1 ರಂದು ಆಚರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಪ್ರಯುಕ್ತ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪೆರಿಯೋಡಾಂಟಿಕ್ಸ್ ವಿಭಾಗದಲ್ಲಿ ಆಗಸ್ಟ್ 1 ರಿಂದ 5 ರವರೆಗೆ ಉಚಿತವಾಗಿ ಹಲ್ಲು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ. ನೀತು ಸಿ. ಅಣ್ಣಿಗೇರಿ ಕೋರಿದ್ದಾರೆ.