ಭವಿಷ್ಯದ ಯುವಜನತೆ ಗುಣದಿಂದ ಶುದ್ಧವಾಗಬೇಕು

ಭವಿಷ್ಯದ ಯುವಜನತೆ ಗುಣದಿಂದ ಶುದ್ಧವಾಗಬೇಕು

ನಂದಿಗುಡಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ವಸಂತ ದೇವಾಡಿಗ

ಮಲೇಬೆನ್ನೂರು, ಜು.30- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಧರ್ಮದ ಆಧಾರದಲ್ಲಿ ನಡೆಯುತ್ತವೆ ಎಂದು ನಂದೀಶ್ವರ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಅಭಿಪ್ರಾಯಪಟ್ಟರು.

ನಂದಿಗುಡಿ ಗ್ರಾಮದ ಶ್ರೀ ನಂದೀಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ `ಸ್ವಾಸ್ಥ್ಯ ಸಂಕಲ್ಪ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.                    

ಸಾಮಾಜಿಕ ಕ್ಷೇತ್ರದ ಎಲ್ಲಾ ರಂಗಗಳಲ್ಲಿ ಈ ಯೋಜನೆ ಜಾರಿಗೊಂಡು, ಪ್ರಗತಿಯಲ್ಲಿದೆ ಎಂಬುದನ್ನು ಕಾಣಬಹುದು ಎಂದರು.

ಯೋಜನೆಯ ಮಲೇಬೆನ್ನೂರು ಯೋಜ ನಾಧಿಕಾರಿ ವಸಂತ ದೇವಾಡಿಗ ಮಾತನಾಡಿ, ಕಷ್ಟದಲ್ಲಿರುವ  ಕುಟುಂಬಗಳಿಗೆ ನಮ್ಮ ಯೋಜನೆ ವರದಾನವಾಗಿದೆ. ನಿರ್ಗತಿಕರಿಗೆ ಮನೆ ನಿರ್ಮಾಣ, ದೇವಾಲಯಗಳ ನಿರ್ಮಾಣಕ್ಕೆ ನೆರವು, ಶಾಲೆಗಳಿಗೆ ಶಿಕ್ಷಕರ ನಿಯೋಜನೆ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು, ಡೆಸ್ಕ್‌ ಒದಗಿಸುವಿಕೆ ಸೇರಿದಂತೆ ಇನ್ನೂ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ. ಭವಿಷ್ಯದ ಯುವಜನತೆ ಗುಣದಿಂದ ಶುದ್ಧವಾಗಬೇಕು ಎಂಬ ಉದ್ದೇಶದಿಂದ ಮಾದಕ ವಸ್ತು ಸೇವನೆ ಕುರಿತು ರಾಜ್ಯದ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ವೀರೇಂದ್ರ ಹೆಗಡೆಯವರ ಸೂಚನೆಯಂತೆ ಕಳೆದ ವರ್ಷದಿಂದ ಮಾಡುತ್ತಾ ಬಂದಿದ್ದೇವೆ ಎಂದರು.

ಸಂಪನ್ಮೂಲ ವ್ಯಕ್ತಿ ಹೆಚ್.ಎಂ. ಮಾತನಾಡಿ, ಧೂಮಪಾನದ ಒಂದು ಸಿಗರೇಟ್ ಐದು ನಿಮಿಷದ ಆಯಸ್ಸನ್ನು ಕೊಲ್ಲುತ್ತದೆ. ಅದು ನಾಲ್ಕು ಸಾವಿರ ವಿಷಕಾರಿ ಪದಾರ್ಥಗಳನ್ನು ಹೊಂದಿದ್ದು, ಸೇವನೆ ಮಾಡುವವರ ಎಲ್ಲಾ ಅಂಗಾಂಗಗಳನ್ನು ಬಲಹೀನ ಮಾಡುತ್ತದೆ. 

ಯುವಜನತೆ ಡ್ರಗ್ಸ್ ಸೇವನೆಗೆ ಹೆಚ್ಚು ಆಕರ್ಷಣೆಯಾಗುತ್ತಿದ್ದು, ದೇಶದಲ್ಲಿ ಒಂದೇ ದಿನ 1246 ಕೋಟಿ ರೂ.ಮೌಲ್ಯದ  ಮಾದಕ ವಸ್ತುಗಳನ್ನು ಸರ್ಕಾರ ನಾಶ ಮಾಡಿದೆ. ರಾಜ್ಯದ ಬೆಂಗಳೂರು, ಶಿವಮೊಗ್ಗ, ಧಾರವಾಡ, ಉಡುಪಿ, ಗೋಕರ್ಣ ಮತ್ತು ಹಂಪಿ ಮತ್ತೆ ಕೆಲವು ಪಟ್ಟಣಗಳಲ್ಲಿ ಡ್ರಗ್ಸ್ ದೊರೆಯುತ್ತಿರುವುದು ವಿಷಾದನೀಯ. ಮಾದಕ ವಸ್ತುವಿನಿಂದ ಪ್ರತಿವರ್ಷ 13 ಲಕ್ಷ ಜನರು ಮರಣ ಹೊಂದುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಹಾಗಾಗಿ ದೇಶದಲ್ಲಿ ಮಾದಕ ವಸ್ತು ನಿಷೇಧಕ್ಕೆ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದ್ದು, ಪ್ರಸ್ತುತ ಇರುವ ನಿಯಮ ಸಾಲದು ಎಂದರು.

ವಿದ್ಯಾರ್ಥಿಗಳಾದ ನಿರ್ಮಲ, ಹಾಲಮ್ಮ, ಪ್ರಜ್ವಲ್, ರೋಷನ್ ತಮ್ಮ ಅನಿಸಿಕೆಗಳನ್ನು  ಹಂಚಿ ಕೊಂಡರು. ಕೊಕ್ಕನೂರು ವಲಯದ ಮೇಲ್ವಿಚಾರಕಿ ಶಾರದ, ಶಿಕ್ಷಕಿ ರೂಪ, ಕೊಕ್ಕನೂರು ಅರ್ಚಕ ಹನುಮಂತಸ್ವಾಮಿ ಮತ್ತಿತರರು ಹಾಜರಿದ್ದರು.

error: Content is protected !!