ಜಗಳೂರು, ಜು.30- ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ವಿಧಾನ ಪರಿಷತ್ ಸ್ಥಳೀಯ ಶಾಸಕರ ಅಭಿವೃದ್ದಿ ಅನುದಾನದಡಿಯಲ್ಲಿ ಕಳೆದ ಮೂರೂವರೆ ವರ್ಷಗಳಿಂದ ನಿರ್ಮಿಸುತ್ತಿರುವ ಸರ್ಕಾರಿ ಮಾದರಿ ಶಾಲೆ ಇನ್ನೂ ಮುಕ್ತಾಯದ ಹಂತಕ್ಕೆ ಬಾರದೇ, ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ಮೂರೂವರೆ ವರ್ಷಗಳಿಂದ ಶಾಲಾ ಕಟ್ಟಡದ ಹಿನ್ನೆಲೆ ಮೂಲಭೂತ ಸೌಕರ್ಯ ಗಳಿಲ್ಲದೆ, ವಿದ್ಯಾರ್ಥಿಗಳಿಗನುಗುಣವಾಗಿ ಹೆಚ್ಚುವರಿ ಕೊಠಡಿಗಳಿಲ್ಲದೆ, ಮಳೆಗಾಲದಲ್ಲಿ ಬಯಲಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಹಾಗೂ ಪೋಷಕರು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಗಮನಕ್ಕೆ ತಂದಿದ್ದರೂ, ಯಾವುದೇ ಪ್ರಯೋಜನ ವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸದಿದ್ದರೆ ಎಂಎಲ್ಸಿ ರವಿಕುಮಾರ್ ಅವರ ನಿವಾಸಕ್ಕೆ ವಿದ್ಯಾರ್ಥಿಗ ಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಜಿ. ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯ ಬಿ.ಟಿ ವೆಂಕಟೇಶ್, ಮುಖಂಡರಾದ ಯು.ಸಿ.ರವಿ, ನಿಂಗರಾಜ್, ತಿಮ್ಮೇಶ್, ವೀರೇಶ್, ಗುರಪ್ಪ, ವೆಂಕಟೇಶ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.