ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಕೆ.ಎಂ. ಈಶ್ವರಪ್ಪ
ದಾವಣಗೆರೆ, ಜು.28- ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸ್ವಾವಲಂಬಿ ಬದುಕಿನ ಬಗ್ಗೆ ಆತ್ಮಸ್ಥೈರ್ಯ ಬೆಳೆಸುವುದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಕೆ.ಎಂ. ಈಶ್ವರಪ್ಪ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ, ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ತಾಲ್ಲೂಕಿನ ಆವರಗೊಳ್ಳ ಗ್ರಾಮದ ಬಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈ ನೀತಿ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗಿರುವ ಅಗತ್ಯ ಮಾಹಿತಿ ನೀಡಿ, ಭಾರತವನ್ನು ಆರ್ಥಿಕವಾಗಿ ಸಶಕ್ತಗೊಳಿಸಲಿದೆ ಎಂದು ಹೇಳಿದರು.
ಪದವಿ ತರಗತಿಗಳಿಗೆ ಪಠ್ಯ ಕ್ರಮ ತಯಾರಿಸಲು ರಾಜ್ಯ ಮಟ್ಟದಲ್ಲಿ ಅಸ್ತಿತ್ವಕ್ಕೆ ತಂದಿರುವ ಸಮಿತಿಯು ಪಠ್ಯ ಸಿದ್ಧ ಪಡಿಸುವ, ಪರಿಷ್ಕರಿಸುವ ಕಾರ್ಯ ಮಾಡಲಿದೆ ಎಂದು ಈಶ್ವರಪ್ಪ ಹೇಳಿದರು.
ಯುಬಿಡಿಟಿ ಕಾಲೇಜಿನ ಪ್ರಾಧ್ಯಾಪಕ ಡಾ. ನಾಗೇಶ್ ಮಾತನಾಡಿ, ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯೊಳಗಿನ ಶಿಕ್ಷಣದ ಜೊತೆಗೆ ಹೊರಗಡೆ ಕಲಿಯಲು ಅವಕಾಶ ಕಲ್ಪಿಸಿ, ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಿದೆ ಎಂದು ಹೇಳಿದರು.
ಹಿಂದೆ ನಮ್ಮ ತಕ್ಷಶಿಲಾ, ನಲಂದಾ ವಿಶ್ವವಿದ್ಯಾನಿಲಯಗಳು ನೀಡಿದ್ದ, ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಭಾರತವನ್ನು ವಿಶ್ವಗುರು ಆಗಿಸಬೇಕೆಂಬ ಧ್ಯೇಯವನ್ನು ಹೊಸ ಶಿಕ್ಷಣ ನೀತಿ ಹೊಂದಿದೆ ಎಂದರು.
ಎನ್ಇಪಿಯು ಎಂಜಿನಿಯರಿಂಗ್ ಪದವಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ, ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸುವುದರ ಜತೆಗೆ ಸಂಶೋಧನಾ ವಿಧಾನ, ಪರಿಸರ ಜ್ಞಾನ, ಭಾರತದ ಸಂವಿಧಾನವನ್ನು ಓದಲು ಅನುವು ಮಾಡಿಕೊಟ್ಟಿದೆ.
3ರಿಂದ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಎನ್ಎಸ್ಎಸ್, ಯೋಗ, ಕ್ರೀಡೆಗಳಲ್ಲಿ ಯಾವುದಾದರೂ ಒಂದು ಚಟುವಟಿಕೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಂಡ ಮೇಲೆ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಮಾಹಿತಿ ನೀಡಿದರು.
ಗುಣಮಟ್ಟದ ಶಿಕ್ಷಣ ನೀಡಿ, ವಿದ್ಯಾರ್ಥಿಗಳಲ್ಲಿ ಜಾಗತಿಕ ಜ್ಞಾನ ಬೆಳೆಸಿ ಸ್ಪರ್ಧಾತ್ಮಕ ಜಗತ್ತಿಗೆ ಸ್ಪರ್ಧೆಯೊಡ್ಡಲು ಅಣಿಯಾಗುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದರ ಜತೆಗೆ ವೈಜ್ಞಾನಿಕ ಪ್ರಜ್ಞೆ ಬೆಳೆಸಲು ಎನ್ಇಪಿ ಪೂರಕವಾಗಿದೆ ಎಂದು ಜವಹಾರ್ ನವೋದಯ ಶಾಲೆಯ ಪ್ರಾಂಶುಪಾಲರಾದ ವಿಜಯಾ ಹೇಳಿದರು.
21ನೇ ಶತಮಾನಕ್ಕೆ ಬೇಕಾದ ಜ್ಞಾನ ನೀಡಿ ಆತ್ಮ ನಿರ್ಭರ ಭಾರತ ನಿರ್ಮಿಸಲು ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳನ್ನು ಅಣಿಗೊಳಿಸಲಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಕೃತಕ ಬುದ್ಧಿಮತ್ತೆಯ ಪಾಠಗಳನ್ನು ಅಳವಡಿಸಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ವೀರಭದ್ರ ನಾಯಕ್ ಹೇಳಿದರು. ನೀತು ಪಾಂಡೆ ಮತ್ತಿತರರು ಈ ಸಂದರ್ಭದಲ್ಲಿದ್ದರು.