ಮೂರು ಹಂತದಲ್ಲಿ ಮಿಷನ್ ಇಂದ್ರ ಧನುಷ್ ಲಸಿಕಾಕರಣ

ಮೂರು ಹಂತದಲ್ಲಿ ಮಿಷನ್ ಇಂದ್ರ ಧನುಷ್ ಲಸಿಕಾಕರಣ

ಮೀಸೆಲ್, ರೂಬೆಲ್ಲಾ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ : ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್

ದಾವಣಗೆರೆ, ಜು.28- ಮೀಸೆಲ್ ಮತ್ತು ರೂಬೆಲ್ಲಾದಿಂದ ಮುಕ್ತವಾಗಿಸಲು ಮುಂಬರುವ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್‍ನಲ್ಲಿ ಮಿಷನ್ ಇಂದ್ರಧನುಷ್ ಲಸಿಕೆ ಹಾಕಲಾಗುತ್ತಿದ್ದು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕರೆ ನೀಡಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಿಷನ್ ಇಂದ್ರ ಧನುಷ್-5.0 ಅನುಷ್ಟಾನದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಗಳು ಬಹಳ ಪ್ರಮುಖವಾಗಿದ್ದು, ಲಸಿಕೆಗಳು ಮಗು ಹುಟ್ಟಿನಿಂದ 9 ತಿಂಗಳೊಳ ಗಾಗಿ ಎಲ್ಲಾ ಅಗತ್ಯವಿರುವ ಚುಚ್ಚುಮದ್ದುಗಳನ್ನು ಹಾಕಬೇಕು. ಮಿಷನ್ ಇಂದ್ರ ಧನುಷ್ ಲಸಿಕೆಯು ವಿವಿಧ 12 ರೋಗ ನಿರೋಧಕ ಶಕ್ತಿಗೆ ಚುಚ್ಚುಮದ್ದು ಇದಾಗಿದೆ. ಯಾವುದೇ ಮಗು ಹುಟ್ಟಿನಿಂದ 1 ವರ್ಷದೊಳಗಾಗಿ ಸಿಗಬೇಕಾದ ಎಲ್ಲಾ ಲಸಿಕೆಗಳು ಸಿಗುವಂತೆ ನೋಡಿಕೊಳ್ಳ ಬೇಕು. ಏಕೆಂದರೆ ಈ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚುಚ್ಚುಮದ್ದುಗಳು ಮಗುವಿನ ಬೆಳವಣಿಗೆಯಲ್ಲಿ ಬಹಳ ಮಹತ್ವವುಳ್ಳ ದ್ದಾಗಿವೆ. ಈ ಅವಧಿಯಲ್ಲಿ ಲಸಿಕೆ ಹಾಕಿಸಲು ಪ್ರಗತಿ ಕುಂಠಿತವಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಹ ಸೂಚನೆ ನೀಡಿದರು. 

ದಡಾರ-ರೂಬೆಲ್ಲಾ ನಿರ್ಮೂಲನೆಗಾಗಿ ಮಿಷನ್ ಇಂದ್ರ ಧನುಷ್ ಲಸಿಕೆಯನ್ನು ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ಬರುವ ಆಗಸ್ಟ್ 7 ರಿಂದ 12 ರ ವರೆಗೆ ನೀಡಲಾಗುತ್ತಿದೆ ಮತ್ತು ಸೆಪ್ಟೆಂಬರ್‍ನಲ್ಲಿ 11 ರಿಂದ 16 ರ ವರೆಗೆ ಮತ್ತು ಅಕ್ಟೋಬರ್ 9 ರಿಂದ 14 ರ ವರೆಗೆ ಲಸಿಕೆಯನ್ನು ನೀಡಲಾಗುತ್ತಿದೆ. ಈ ಹಿಂದೆ ಲಸಿಕೆಯಿಂದ ಬಿಟ್ಟು ಹೋದಂತಹ ಮಕ್ಕಳು ಯಾರೂ ಸಹ ಹೊರಗುಳಿಯಬಾರದು. ಮಿಷನ್ ಇಂದ್ರ ಧನುಷ್ ಲಸಿಕೆ ಹಾಕುವ ಬಗ್ಗೆ ತಾಲ್ಲೂಕು ಮಟ್ಟದಲ್ಲಿಯೂ ಸಭೆಯನ್ನು ಮಾಡುವ ಮೂಲಕ ಇದು ಹಬ್ಬದೋಪಾದಿಯಲ್ಲಿ ಲಸಿಕಾಕರಣವಾಗುವಂತೆ ನೋಡಿಕೊಳ್ಳಬೇಕು. 

ದಡಾರ ಮತ್ತು ರೂಬೆಲ್ಲಾದಿಂದ ಯಾವುದೇ ಮಗು ಮರಣ ಹೊಂದಬಾರದು. ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳಿಗೆ ಇಂದ್ರ ಧನುಷ್ ತಲುಪಬೇಕು, ಇದು ಯಾವುದೇ ಜಾತಿ, ಧರ್ಮಭೇದವಿಲ್ಲದ ಎಲ್ಲಾ ಮಕ್ಕಳಿಗೂ ಹಾಕಿಸಬೇಕು. ಎಲ್ಲಿ ಸಮಸ್ಯೆ ಇದೆ ಎಂದು ಅರಿತು ಸಂಬಂಧಿಸಿದ ಮುಖಂಡರು, ಗುರುಗಳ ನೆರವನ್ನು ಪಡೆದು ಮನವರಿಕೆ ಮಾಡಿಕೊಡುವ ಮೂಲಕ ಲಸಿಕೆ ಹಾಕಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿ, ಈ ನಿಟ್ಟಿನಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿದ್ದು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ತಿಳಿಸಿದರು. 

ಜಿಲ್ಲೆಯಲ್ಲಿ 710 ಗರ್ಭಿಣಿ ತಾಯಂದಿರು, 2 ವರ್ಷದೊಳಗಿನ 3154, 2.5 ವರ್ಷದೊಳಗಿನ 170 ಮಕ್ಕಳಿಗೆ ಮಿಷನ್ ಇಂದ್ರ ಧನುಷ್ ಲಸಿಕೆಯನ್ನು ಹಾಕಲು ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಂಡಗಳು ಹಾಗೂ ಮೊಬೈಲ್ ತಂಡಗಳನ್ನು ರಚಿಸಲಾಗಿದೆ ಎಂದು ಆರ್.ಸಿ.ಹೆಚ್.ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್. ಸಭೆಯಲ್ಲಿ ತಿಳಿಸಿದರು. 

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!