ಕೆರೆಗೆ ಜೀವ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲ್ಯಾಘನೀಯ

ಕೆರೆಗೆ ಜೀವ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲ್ಯಾಘನೀಯ

ಗ್ರಾಮ ಒನ್‌ಗಳಿಗೆ ಭೇಟಿ

ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್, ಕಾರಿಗನೂರು, ನಲ್ಕುದರೆ ಗ್ರಾಮ ಒನ್ ಕಚೇರಿಗಳಿಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ  ಸಲ್ಲಿಸಲು ಪರದಾ ಡುತ್ತಿದ್ದ ಜನರ ಸಮಸ್ಯೆಗಳನ್ನು ಆಲಿಸಿದರು. 

ಬಳಿಕ ಖುದ್ದು ಕಂಪ್ಯೂಟರ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಪರಿಶೀಲಿಸಿ, ಜನರಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತೊಂ ದರೆ ಆಗದಂತೆ ಎಚ್ಚರಿಕೆ ವಹಿಸುವಂತೆ ಗ್ರಾಮ ಒನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಜನರಿಗೆ ಸ್ವೀಕೃತಿ ಪತ್ರವನ್ನು ವಿತರಿಸಿದರು.

ದಾವಣಗೆರೆ, ಜು. 27-  ಕೆರೆಗಳಿಗೆ ಜೀವ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. 

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ನಮ್ಮ ಊರು, ನಮ್ಮ ಕೆರೆ’ ಯೋಜನೆಯಡಿ ಪುನಶ್ಚೇತನಗೊಳಿಸಿದ 525ನೇ ಕೆರೆ ಹಸ್ತಾಂತರ ಮತ್ತು ಬಾಗಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆರೆಗಳು ರೈತರ ಜೀವನಾಡಿ. ಅವುಗಳ ಪುನಶ್ಚೇತನಕ್ಕೆ ಸರ್ಕಾರ ಪ್ರತಿವರ್ಷ ಲಕ್ಷಾಂತರ ರೂಪಾಯಿ ಮೀಸಲಿಟ್ಟಿರುತ್ತದೆ. ಆದರೆ, ಕೆಲಸ ಅಷ್ಟಕ್ಕಷ್ಟೇ. ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದ ಕೆರೆಗಳ ಪುನಶ್ಚೇತನ ಮಾಡುತ್ತಿರುವ ಕಾರ್ಯ ಶ್ಲ್ಯಾಘನೀಯ’ ಎಂದರು.

ಕೆರೆಗಳ ಪುನಶ್ಚೇತನದಿಂದ ಮಳೆ ನೀರು ಸಂಗ್ರಹವಾಗಿ ಜಾನುವಾರು ಹಾಗೂ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗಲಿದೆ. ಕೆರೆಗಳ ಪುನಶ್ಚೇತನಕ್ಕೆ ನಾನು ಜಿಪಂ ಸದಸ್ಯನಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಿದ್ದೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಇನ್ನು ಸಾಕಷ್ಟು ಕೆರೆಗಳು ಇವೆ. ಅವುಗಳ ಪುನಶ್ಚೇತನಕ್ಕೆ ಧರ್ಮಸ್ಥಳ ಸಂಸ್ಥೆ ಮುಂದಾಗಬೇಕು. ನಿಮಗೆ ಬೇಕಾದ ಸಹಕಾರ ನೀಡುತ್ತೇನೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಿಗೆ ಮನವಿ ಮಾಡಿದರು.

‘21ನೇ ಶತಮಾನದಲ್ಲಿ ನಾವು ಎದುರಿಸುತ್ತಿರುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಅನ್ವೇಷಿಸುವುದಾಗಿದೆ. ಪ್ರಕೃತಿಯನ್ನು ಉಳಿಸಿ ನೀರನ್ನು ಸಂರಕ್ಷಿಸಬೇಕಾಗಿದೆ. ಏಕೆಂದರೆ ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಜಲವೇ ಸಂಜೀವಿನಿ’ ಎಂದು ಹೇಳಿದರು.

‘ಭೂಮಿಯಲ್ಲಿ ಸಿಹಿ ನೀರಿನ ಅಂಶ ಬಹಳ ಕಡಿಮೆ ಇದೆ. ಜನಸಂಖ್ಯೆ ಹೆಚ್ಚಳ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕೀಕರಣ, ಅರಣ್ಯ ನಾಶ ಕಾರಣಗಳಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ನೀರನ್ನು ಅನವಶ್ಯಕವಾಗಿ ಪೋಲು ಮಾಡದೆ ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ರವಿಚಂದ್ರನ್ ನಾಗನಾಳ, ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಕಾಂಗ್ರೆಸ್ ಮುಖಂಡ ಡಿ.ತಿಪ್ಪಣ್ಣ, ಗಣೇಶ್, ಷಣ್ಮುಖಪ್ಪ ಸೇರಿದಂತೆ ಇನ್ನಿತರರಿದ್ದರು.

error: Content is protected !!