ಹರಪನಹಳ್ಳಿ ತಾಲ್ಲೂಕಿನಲ್ಲಿ ಮಳೆ, ಬೆಳೆ ಹಾನಿ

ಹರಪನಹಳ್ಳಿ ತಾಲ್ಲೂಕಿನಲ್ಲಿ ಮಳೆ, ಬೆಳೆ ಹಾನಿ

ನದಿ ತೀರದ ಗ್ರಾಮಗಳಿಗೆ ಶಾಸಕರಾದ ಲತಾ ಭೇಟಿ, ಬೆಳೆ ಹಾನಿ ಪರಿಶೀಲನೆ

ಹರಪನಹಳ್ಳಿ, ಜು. 27- ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ 50ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದು, ಅಲ್ಪ ಪ್ರಮಾಣದಲ್ಲಿ ಬೆಳೆ ಹಾನಿಯಾಗಿವೆ.

ಹಲುವಾಗಲು 11,  ಕಡತಿ 12, ದುಗ್ಗಾವತಿ 4 ಸೇರಿದಂತೆ 50ಕ್ಕೂ ಹೆಚ್ಚು ಮನೆಗಳು ಭಾಗಶಃ ಜಖಂಗೊಂಡಿವೆ. ಜಂಬು ಲಿಂಗನಹಳ್ಳಿಯಲ್ಲಿ ದಾಸಪ್ಪ ಎನ್ನುವವರ ಮನೆ ಗೋಡೆ ಕುಸಿದಿದ್ದು ಈ ವೇಳೆ ಮನೆ ಯಲ್ಲಿ ಭಾಗ್ಯಮ್ಮ ಗಾಯಗೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದುಗ್ಗಾವತಿ ಬಳಿ 1 ಎಕರೆ ಟೊಮ್ಯಾಟೊ ಬೆಳೆಗೆ ಹಾನಿಯಾಗಿದೆ ಹಾಗೂ ತಾವರಗುಂದಿ ಬಳಿ 1 ಎಕರೆ ಬೆಂಡೆಕಾಯಿ ಬೆಳೆಗೆ ಹಾನಿಗೀಡಾಗಿದೆ. ಯರಬಾಳು ಹಾಗೂ ಮತ್ತೂರು ಗ್ರಾಮಗಳ ಬಳಿ ಸಾಕಷ್ಟು ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು, ತಾಲೂಕಿನಾದ್ಯಂತ ಒಟ್ಟು 198 ಶಾಲಾ ಕೊಠಡಿಗಳು ಶಿಥಿಲಗೊಂಡು ಸೋರುತ್ತಿವೆ. 

ಶಾಸಕರ ಭೇಟಿ : ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಬುಧವಾರ ದುಗ್ಗಾವತಿ, ವಟ್ಲಹಳ್ಳಿ, ಕಡತಿ, ನಂದ್ಯಾಲ, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ಹಲುವಾಗಲು ಗರ್ಭಗುಡಿ, ಕಣಿವಿ ಸೇರಿದಂತೆ ನದಿ ತೀರದ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಹಾನಿಯನ್ನು ಪರಿಶೀಲಿಸಿದರು.

ದುಗ್ಗಾವತಿಯಲ್ಲಿ ಶಿಥಿಲಗೊಂಡ ಓವರ್‍ಹೆಡ್ ಟ್ಯಾಂಕ್‌ ನೋಡಿದ ಅವರು, ಸ್ಥಳೀಯ ಗ್ರಾಪಂ ಪಿಡಿಓ ಅವರಿಗೆ ಮುಂಜಾಗೃತಾ ಕ್ರಮವಾಗಿ ಓವರ್ ಹೆಡ್ ಟ್ಯಾಂಕನ್ನು ನೆಲಸಮಗೊಳಿಸಲು ಸೂಚಿಸಿದರು. ಹಲುವಾಗಲು ಬಳಿ ಸಹ ಶಿಥಿಲಗೊಂಡ ಓವರ್‍ಹೆಡ್ ಟ್ಯಾಂಕನ್ನು ಪರಿಶೀಲಿಸಿದರು.

ವಟ್ಲಹಳ್ಳಿ ಸೇರಿದಂತೆ ನದಿ ತೀರದ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿನ ಶಿಥಿಲಗೊಂಡ ಕೊಠಡಿಗಳನ್ನು ವೀಕ್ಷಿಸಿ, ಈ ಕೊಠಡಿಗಳ ದುರಸ್ತಿಯನ್ನು ಪ್ರಕೃತಿ ವಿಕೋಪದಡಿ ಮಾಡಿಸಲು ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಎಇಇ ನಾಗಪ್ಪ ಅವರಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬೆಳೆಹಾನಿ ಸಮೀಕ್ಷೆಯನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮನೆ ಮತ್ತು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ಮಳೆ ಇನ್ನೂ ಎರಡು ದಿನಗಳು ಬರುವ ನಿರೀಕ್ಷೆ ಇದ್ದು, ನದಿ ತೀರದ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಶಾಲೆಗಳಲ್ಲಿ ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಅಧಿಕಾರಿಗಳು ಹಾಗೂ ಶಿಕ್ಷಕರು ಮುಂಜಾಗೃತಾ ಕ್ರಮವಹಿಸಬೇಕು ಎಂದು ಅವರು ಹೇಳಿದರು.

ನದಿ ತೀರದ ಗ್ರಾಮಗಳಲ್ಲಿ ಗ್ರಾಮಸ್ಥರು ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕೈಗೊಳ್ಳಲು ಮನವಿ ಮಾಡಿಕೊಂಡಾಗ ಶಾಸಕರು ಈ ಬಗ್ಗೆ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಇಓ ಕೆ.ಆರ್.ಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೋಂದಿ, ಕ್ಷೇತ್ರ ಶಿಕ್ಷಣಾ ಧಿಕಾರಿ ಯು. ಬಸವರಾಜಪ್ಪ, ಪಂಚಾಯತ್ ರಾಜ್ ಇಲಾಖೆಯ ಎಇಇ ನಾಗಪ್ಪ, ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಪಿಡಬ್ಲ್ಯೂಡಿ ಎಇಇ ಸತೀಶ್ ಪಾಟೀಲ್, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ, ರವಿಕುಮಾರ, ಇಸಿಓ ಮಂಜುನಾಥ ಗಿರಜ್ಜಿ, ಹಲುವಾಗಲು ಪಿಎಸ್‍ಐ ಆರ್.ನಾಗರತ್ನ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

error: Content is protected !!