ಆಮಿಷದಿಂದ ಯುವ ಸಮೂಹ ದುಡಿಮೆಯಿಂದ ವಿಮುಖ

ಆಮಿಷದಿಂದ ಯುವ ಸಮೂಹ ದುಡಿಮೆಯಿಂದ ವಿಮುಖ

ಜಗಳೂರಿನ ಕಾರ್ಯಕ್ರಮದಲ್ಲಿ ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಕಳವಳ

ಜಗಳೂರು, ಜು.27- ದೇಶದ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಹಣ, ಹೆಂಡ ಆಮಿಷವೊಡ್ಡಿ ಚುನಾವಣೆ ನಡೆಸುತ್ತಾರೆ. ಇದರಿಂದ ಯುವ ಸಮೂಹ ದುಡಿಮೆಯಿಂದ ವಿಮುಖಗೊಂಡು. ನಿರುದ್ಯೋಗಿ, ಸೋಮಾರಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೆಬ್ಬಾಳ್ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ‌ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವರ್ಜನೆ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯುವ ಸಮೂಹ ಆಮಿಷಕ್ಕೊಳಗಾಗಿ ದುಶ್ಚಟಕ್ಕೆ ಬಲಿಯಾಗದೇ ನಿತ್ಯ ಕಾಯಕದಲ್ಲಿ ತೊಡಗಿಕೊಂಡು ದುಡಿಮೆ ಹಣದಿಂದ ಸುಂದರ ಬದುಕು ಕಟ್ಟಿಕೊಳ್ಳಬೇಕು  ಎಂದು ಶ್ರೀಗಳು ಕಿವಿಮಾತು ಹೇಳಿದರು.

ಧರ್ಮಸ್ಥಳ ಸಂಘದ ಆರ್ಥಿಕ‌ ಸಾಲಸೌಲಭ್ಯದ ಜೊತೆಗೆ  ಸಮಾಜಮುಖಿ ಕಾರ್ಯಗಳು ಶ್ಲ್ಯಾಘನೀಯ. ಧರ್ಮಸ್ಥಳ ಸಂಘ ಋಷಿ ಆಶ್ರಮವಿದ್ದಂತೆ, ಸುಜ್ಞಾನಿಗಳ ಸಂಘ ಮಾಡಿ ಮದ್ಯವ್ಯಸನಿಗಳು ಅಂಧಕಾರದ ಬದುಕಿನಿಂದ ಬೆಳಕಿನೆಡೆಗೆ ಸಾಗಬೇಕು. 

12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಆಧುನಿಕ ಸಮಾಜಕ್ಕೆ ಮಾದರಿಯಾಗಬೇಕು. ಸಂಘ, ಸಂಸ್ಥೆಗಳು ಲಾಭಾಂಶದಲ್ಲಿ ದೀನ, ದುರ್ಬಲರಿಗೆ ನೆರವಾಗಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಮಾತನಾಡಿ, ದೇಶದಲ್ಲಿ ಯುವ ಸಮೂಹ ಹೆಚ್ಚಾಗಿದ್ದು, ಸದೃಢ ದೇಶ ನಿರ್ಮಾಣ ಮಾಡುವ ಯುವ ಶಕ್ತಿ ಸಬಲವಾಗಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದರು.

ಉದ್ದೇಶಪೂರ್ವಕವಾಗಿ ಯಾರೊಬ್ಬರೂ ಮದ್ಯವ್ಯಸನಿಯಾಗುವುದಿಲ್ಲ. ಕೆಲ ಪರಿಸ್ಥಿತಿಗಳ ಕೈಗೊಂಬೆಯಾಗಿ, ಸಮಾಜದಲ್ಲಿನ ಸಹವಾಸ, ಸಮಸ್ಯೆಗಳಿಂದ ದುಶ್ಚಟಗಳಿಗೆ  ಬಲಿಯಾಗುತ್ತಾರೆ. ಸ್ವಯಂ ಪ್ರೇರಿತರಾಗಿ ನಿಮ್ಮ‌ ಜೀವನ ರೂಪಿಸಿಕೊಳ್ಳುವ ಹಾದಿಯಲ್ಲಿ ಸಾಗಬೇಕು ಎಂದು ಅವರು ಹಿತ ನುಡಿದರು. 

ಜನಜಾಗೃತಿ  ವೇದಿಕೆ ಜಿಲ್ಲಾಧ್ಯಕ್ಷ ಷಡಕ್ಷರಪ್ಪ ಮಾತನಾಡಿ, ಮದ್ಯವ್ಯಸನಗಳಿಂದ ಆರ್ಥಿಕ ಸಮಸ್ಯೆಗಳು ಉದ್ಭವವಾಗಿ ಬೇರೊಬ್ಬರನ್ನು ಹಣ ಬೇಡುವ ಪರಿಸ್ಥಿತಿ ಎದುರಾಗುತ್ತವೆ. ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡರೆ, ಕುಟುಂಬದಲ್ಲಿ ನೆಮ್ಮದಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕರಾದ ಬಿ.ಗೀತಾ, ಫಾದರ್ ವಿಲಿಯಂ ಮಿರಾಂದ, ಮದ್ಯವರ್ಜನೆ ಶಿಬಿರದ ಅಧ್ಯಕ್ಷ ಜಿ.ಎಸ್.ಚಿದಾನಂದ, ಗೌರವ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿರ್ದೇಶಕ ಜನಾರ್ದನ್, ಬಿಇಓ ಸುರೇಶ್ ರೆಡ್ಡಿ, ಟಿ.ಎಚ್.ಓ ಡಾ. ನಾಗರಾಜ್, ತಾಲ್ಲೂಕು ಯೋಜನಾಧಿಕಾರಿ ಗಣೇಶ್, ಶಿಬಿರಾಧಿಕಾರಿ ನಾಗರಾಜ್, ಮದ್ಯವರ್ಜನೆ ಸಮಿತಿ ಸದಸ್ಯರಾದ ಬಿ.ಲೋಕೇಶ್, ಓ.ಮಂಜಣ್ಣ, ಹೊನ್ನೂರು ಸ್ವಾಮಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಪಿ.ಎಸ್.ಅರವಿಂದನ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!