ಸಂಸದ ಸಿದ್ದೇಶ್ವರಗೆ ವಾಟ್ಸಾಪ್ ವಿಡಿಯೋ ಕರೆ

ಸಂಸದ ಸಿದ್ದೇಶ್ವರಗೆ ವಾಟ್ಸಾಪ್ ವಿಡಿಯೋ ಕರೆ

ಖಾಸಗಿ ಭಾಗಗಳನ್ನು ತೋರಿಸಿದ ಮಹಿಳೆ, ಹಣಕ್ಕೆ ಬೇಡಿಕೆ: ದೂರು ದಾಖಲು

ದಾವಣಗೆರೆ, ಜು. 26- ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ  ಮಹಿಳೆ ಯೊಬ್ಬರು ವಾಟ್ಸ್ ಆಪ್ ಕರೆ ಮಾಡಿ, ಫೋಟೋ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವು ದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಈ ಕುರಿತು ಸಂಸದರು ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾದ  ಕೂಡಲೇ ವಂಚಕರು ತಮ್ಮ ಸುಲಿಗೆ ತಂತ್ರವನ್ನು ಅಲ್ಲಿಗೇ ನಿಲ್ಲಿಸಿದ್ದಾರೆ. 

ಪ್ರಾಥಮಿಕ ತನಿಖೆಗಳಲ್ಲಿ ಸಿದ್ದೇ ಶ್ವರ ಅವರಿಗೆ ಬಂದಿದ್ದ ವಿಡಿಯೋ ಕರೆ ರಾಜಸ್ಥಾನದಿಂದ ಬಂದಿದ್ದೆಂದು ಕಂಡು ಬಂದಿದ್ದು,  ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸಂಸದರು ಇತ್ತೀಚೆಗೆ ಬೆಂಗಳೂರಿಗೆ ಚಿಕಿತ್ಸೆಗಾಗಿ ತೆರಳಿದ್ದು, ಯುಬಿ ಸಿಟಿಯ ಬಳಿಯ ಫ್ಲ್ಯಾಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು.  ಜು. 20ರಂದು ರಾತ್ರಿ 10.20ರ ಸುಮಾರಿಗೆ ವಾಟ್ಸಾಪ್ ಸಂದೇಶ ಬಂದಿದೆ. ಬಂದಿದ್ದ ಆ ಮೆಸೇಜ್ ನಲ್ಲಿ ‘ಹಾಯ್, ಹೌ ಆರ್ ಯೂ’ ಎಂದು ಬರೆಯಲಾಗಿತ್ತು.  ಹೊಸ ನಂಬರ್  ಆಗಿದ್ದರಿಂದ ಸಂಸದರು ಇದಕ್ಕೆ ಉತ್ತರ ಕೊಟ್ಟಿಲ್ಲ.

ನಂತರ ರಾತ್ರಿ 10.22ಕ್ಕೆ ಅದೇ ಸಂಖ್ಯೆಯಿಂದ ವಾಟ್ಸ್ ಆಪ್ ವಿಡಿಯೋ ಕಾಲ್ ಬಂದಿದ್ದು, ಕರೆ ಸ್ವೀಕರಿಸಿದ ಸಿದ್ದೇಶ್ವರ ಅವರಿಗೆ ಅತ್ತ ಕಡೆಯಿಂದ ಮಹಿಳೆಯೊಬ್ಬರು ಹಿಂದಿಯಲ್ಲಿ ಮಾತನಾಡಿಸಿ ದ್ದಾರೆ. ಅದಕ್ಕೆ ಉತ್ತರಿಸಿದ ಸಿದ್ದೇಶ್ವರ ಅವರು, ಯಾರು ನೀವು, ಏನು ವಿಷಯ ಎಂದು ಕೇಳುವಷ್ಟರಲ್ಲೇ ಆ ಮಹಿಳೆಯು ತನ್ನ ಖಾಸಗಿ ಭಾಗಗಳನ್ನು ತೋರಿಸಲು ಆರಂಭಿಸಿದ್ದು, ಗಾಬರಿಗೊಂಡ ಸಂಸದರು ಕರೆ ಕಟ್ ಮಾಡಿದ್ದಾರೆ.

ಮತ್ತೆ ರಾತ್ರಿ 10.24ರ ಸುಮಾರಿಗೆ ಪುನಃ ಅಂಥದ್ದೇ ವಾಟ್ಸ್ ಆಪ್ ವಿಡಿಯೋ ಕಾಲ್ ಬಂದಿದ್ದು, ಆಗ ತಮ್ಮಲ್ಲಿದ್ದ ಫೋನನ್ನು ತಮ್ಮ ಪತ್ನಿಗೆ ನೀಡಿದ್ದಾರೆ. ಸಂಸದರ ಪತ್ನಿ ಫೋನ್ ಕರೆ ರಿಸೀವ್ ಮಾಡಿ ಬಯ್ದಿದ್ದಾರೆ. ಆಗ, ಆ ಮಹಿಳೆ ಕಾಲ್ ಕಟ್ ಮಾಡಿದ್ದಾರೆ.

ಅದೇ ದಿನ 10.47ರ ಸುಮಾರಿಗೆ ಸಿದ್ದೇಶ್ವರ ಅವರಿಗೆ ವಿಡಿಯೋ ಕಾಲ್ ನ ರೆಕಾರ್ಡಿಂಗ್ ಗಳನ್ನು ಕಳುಹಿಸಿದ ಆ ಮಹಿಳೆಯು, ನೀವು ನನ್ನ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತಾಡಿದ್ದೀರಿ, ನನ್ನ ಖಾಸಗಿ ವಿಡಿಯೋಗಳನ್ನೂ ನೋಡಿದ್ದೀರಿ. ನಾವು ಕೇಳಿದಷ್ಟು ಹಣ ಕೊಡದೇ ಹೋದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ.

ತಕ್ಷಣವೇ ಸಿದ್ದೇಶ್ವರ ಅವರು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರಿಗೆ ಫೋನ್ ಮಾಡಿ, ವಿಚಾರ ತಿಳಿಸಿದ್ದಾರೆ. ಅವರ ಸೂಚನೆಯ ಮೇರೆಗೆ, ಮರು ದಿನವೇ ಅವರು ಬೆಂಗಳೂರಿನಲ್ಲಿ ಡಿಸಿಪಿಯಾಗಿರುವ ಸಿ.ಆರ್. ಗೀತಾ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ದೂರು ದಾಖಲಿಸಿದ್ದಾರೆ.

ಪೊಲೀಸರಲ್ಲಿ ದೂರು ದಾಖಲಿಸುವಾಗಲೇ ಅತ್ತ ಕಡೆಯಿಂದ ವಂಚಕರಿಂದ ಬೆದರಿಕೆಯ ಫೋನ್ ಕರೆಗಳು ಹಾಗೂ ಸಂದೇಶಗಳು ಬಂದಿವೆ.  ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

error: Content is protected !!