ಮುಂದಿನ ವಾರ ಭದ್ರಾ ಕಾಡಾ ಸಭೆ ಸಾಧ್ಯತೆ

ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 162 ಅಡಿ ತಲುಪುತ್ತಿದ್ದಂತೆಯೇ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿಗೆ ನೀರು ಹರಿಸಲು ಭದ್ರಾ ಕಾಡಾ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಆಗಸ್ಟ್‌ 1 ರಿಂದ ನಾಲೆಗಳಲ್ಲಿ ನೀರು ಹರಿಸುವಂತೆ ಅಚ್ಚುಕಟ್ಟಿನ ರೈತರು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ರೈತ ಮುಖಂಡರ ಹಾಗೂ ಅಚ್ಚುಕಟ್ಟಿನ ಜನಪ್ರತಿನಿಧಿಗಳ ಸಭೆ ಕರೆದು ನೀರು  ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಭದ್ರಾ ಕಾಡಾ ಆಡಳಿತಾಧಿಕಾರಿ ಬಿ.ವಿ. ಜಗದೀಶ್‌ ತಿಳಿಸಿದ್ದಾರೆ.

ಅಚ್ಚುಕಟ್ಟು ಪ್ರದೇಶಕ್ಕೆ ಮಳೆಗಾಲದ ಬೆಳೆಗೆ ನೀರು ಹರಿಸಲು ಜಲಾಶಯದಲ್ಲಿ 36 ಟಿಎಂಸಿ ನೀರಿನ ಅಗತ್ಯವಿದೆ. ಸದ್ಯ ಜಲಾಶಯದಲ್ಲಿ 27.5 ಟಿಎಂಸಿ ನೀರು ಬಳಕೆಗೆ ಲಭ್ಯವಿದ್ದು, ಇನ್ನೂ 9 ಅಡಿ ನೀರು ಬಂದರೆ ನಾಲೆಗಳಿಗೆ ನೀರು  ಹರಿಸಲು ಅವಕಾಶವಿದೆ. 

ಜುಲೈ 28 ರವರೆಗೆ ಮಳೆ ಮುಂದುವರೆಯುವ ಮುನ್ಸೂಚನೆ ಇದ್ದು, ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಬಹುದೆಂಬ ವಿಶ್ವಾಸವಿದೆ. ಮಳೆಗಾಲ ಆಗಸ್ಟ್‌ವರೆಗೂ ಇರುವುದರಿಂದ ಜಲಾಶಯ ಭರ್ತಿ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಗದೀಶ್‌ ಹೇಳಿದ್ದಾರೆ.

ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರೆ ಅಚ್ಚುಕಟ್ಟಿನ 2.42 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲಿದ್ದಾಳೆ. 

ಜಲಾಶಯ ಭರ್ತಿಯಾದರೆ ಬೇಸಿಗೆ ಬೆಳೆಗೂ ನೀರು ಸಿಗಲಿದೆ.

error: Content is protected !!