ಮಲೇಬೆನ್ನೂರು, ಜು.25- ಪಟ್ಟಣದ ಪುರಸಭೆ ಕಛೇರಿ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಮಳೆಯಲ್ಲೇೇ ನಿಂತು ಅರ್ಜಿ ಹಾಕುತ್ತಿರುವುದನ್ನು ಕಣ್ಣಾರೆ ಕಂಡ ಶಾಸಕ ಬಿ.ಪಿ. ಹರೀಶ್ ಅವರು ನೀರಾವರಿ ಇಲಾಖೆ ಯಲ್ಲಿ ಖಾಲಿ ಇರುವ ಸಭಾ ಭವನದಲ್ಲಿ ಬುಧ ವಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ನೀರಾವರಿ ಇಲಾ ಖೆಯ ಇಂಜಿನಿಯರ್ಗೆ ಸೂಚನೆ ನೀಡಿದರು.
ಮಂಗಳವಾರ ಇಲ್ಲಿನ ಪುರಸಭೆಗೆ ದಿಢೀರ್ ಭೇಟಿ ನೀಡಿದ ಹರೀಶ್ ಅವರು ಕಛೇರಿ ಆವರಣದಲ್ಲಿ ಜಿಟಿಜಿಟಿ ಮಳೆಯಲ್ಲೇ ಮಹಿಳೆಯರು ನಿಂತಿರುವುದನ್ನು ನೋಡಿದರು. ನಂತರ ಮುಖ್ಯಾಧಿಕಾರಿ ಎ. ಸುರೇಶ್ ಅವರೊಂದಿಗೆ ಈ ಕುರಿತು ಚರ್ಚಿಸಿದಾಗ ನೀರಾವರಿ ಇಲಾಖೆಯ ಕಛೇರಿಯಲ್ಲಿ ಮೀಟಿಂಗ್ ಹಾಲ್ ಖಾಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಲ್ಲಿಗೆ ತೆರಳಿದರು.
ಅಲ್ಲಿ ಮೀಟಿಂಗ್ ಹಾಲ್ ವೀಕ್ಷಿಸಿ ಮಳೆಗಾಲ ಆಗಿರುವುದರಿಂದ ಪುರಸಭೆ ಕಛೇರಿಯಲ್ಲಿ ಮಹಿಳೆಯರು ನಿಲ್ಲಲು ಜಾಗವಿಲ್ಲ. ಹಾಗಾಗಿ ಇಲ್ಲಿ ಅವಕಾಶ ಮಾಾಡಿಕೊಡಿ ಎಂದು ಕಾರ್ಯ ಪಾಲಕ ಅಭಿಯಂತರ ಸತೀಶ್ ಪಾಟೀಲ್ ಅವರಿಗೆ ಮೊಬೈಲ್ ಮೂಲಕ ಶಾಸಕ ಹರೀಶ್ ಅವರು ಹೇಳಿದಾಗ ಸಮ್ಮತಿ ಸೂಚಿಸಿದರು.
ಬುಧವಾರದಿಂದ ಪಟ್ಟಣದ ಮಹಿಳೆಯರು ನೀರಾವರಿ ಇಲಾಖೆಯ ಮೀಟಿಂಗ್ ಹಾಲ್ನಲ್ಲಿ ತೆರೆಯುವ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿಯಾಗಿ ಸುರೇಶ್ ತಿಳಿಸಿದ್ದಾರೆ.
ಭದ್ರಾ ಎಇಇ ಧನಂಜಯ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ. ಮಂಜು ನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ಪಿ.ಆರ್. ರಾಜು, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್, ಬಿ. ಸುರೇಶ್, ಎ.ಕೆ. ಲೋಕೇಶ್, ಭೋವಿ ಮಂಜಣ್ಣ, ಆನಂದಚಾರ್, ನ್ಯಾಯಬೆಲೆ ಅಂಗಡಿ ಮಂಜಣ್ಣ, ಜಿ.ಪಿ. ಹನುಮಗೌಡ, ಕೊಮಾರನಹಳ್ಳಿ ಸುನೀಲ್ ಮತ್ತಿತರರು ಈ ವೇಳೆ ಹಾಜರಿದ್ದರು.