ದಾವಣಗೆರೆ, ಜು. 25- ಮಣಿಪುರದ ಜನಾಂಗೀಯ ಘರ್ಷಣೆ, ಮಹಿಳೆಯರ ಮೇಲಿನ ಅತ್ಯಾಚಾರ, ಬೆತ್ತಲೆ ಮೆರವಣಿಗೆ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸಿ ಭಾರತ್ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಸಿಪಿಐ ಕಾರ್ಯ ಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು.
ಮಣಿಪುರ ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಜನಾಂಗೀಯ ಗಲಭೆ ನಡೆಯುತ್ತಿದ್ದು, 150 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 40 ಸಾವಿರಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ. ಇದಲ್ಲದೇ ಮಹಿಳೆಯರ ಮೇಲೆ ದೌರ್ಜನ್ಯ ಸಹ ನಡೆಯುತ್ತಿದೆ. ಹಿಂಸಾಚಾರ ನಿಯಂತ್ರಣ ಮಾಡುವಲ್ಲಿ ಮಣಿಪುರ ಮುಖ್ಯಮಂತ್ರಿ, ದೇಶದ ಪ್ರಧಾನಿ ವಿಫಲರಾಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ ಖಂಡಿಸಿ ಸರ್ವೋಚ್ಛ ನ್ಯಾಯಾಲಯ ಕೂಡ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೂ ಪ್ರಧಾನಿ ಹೇಳಿಕೆ ಕಣ್ಣೊರೆಸುವ ತಂತ್ರವಾಗಿದೆ. ಇದಲ್ಲದೇ ಮಣಿಪುರ ರಾಜ್ಯದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲು ಹೋರಾಟಕ್ಕೆ ಮುಂದಾದ ಎನ್ಎಫ್ಐಡಬ್ಲ್ಯೂ ಸಂಘಟನೆಯ ಮಹಿಳಾ ಮುಖಂಡರ ಮೇಲೆ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ರದ್ದು ಮಾಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ಆವರಗೆರೆ ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಆನಂದರಾಜ್, ಐರಣಿ ಚಂದ್ರು, ನರೇಗಾ ರಂಗನಾಥ್, ಗದಿಗೇಶ್ ಪಾಳೇದ, ಚಮನ್ ಸಾಬ್, ಜಯಣ್ಣ, ಕೃಷ್ಣಮೂರ್ತಿ, ಹೆಚ್.ಸಿ. ಉಮಾಪತಿ, ಲಕ್ಷ್ಮಣ್, ಹಾಲೇಶ್, ಕೇಶವ, ಬಸವರಾಜ್, ನೇತ್ರವತಿ, ಸರೋಜ, ಸುರೇಶ್, ಗುಂಡಯ್ಯ ಮತ್ತಿತರರು ಪಾಲ್ಗೊಂಡಿದ್ದರು.