ಮಲೇಬೆನ್ನೂರು, ಜು.26- ಕಳೆದ 4-5 ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಭಾನುವಳ್ಳಿ-ಲಕ್ಕಶೆಟ್ಟಿಹಳ್ಳಿ ಗ್ರಾಮಗಳ ಮಧ್ಯದ ರಸ್ತೆ ಕಾಲುವೆಯ ಸೇತುವೆ ಮಂಗಳವಾರ ಕುಸಿದು ಬಿದ್ದಿದೆ.
ಎರಡೂ ಗ್ರಾಮಗಳ ಮಧ್ಯದ ರಸ್ತೆಗೆ ಕೂಡುವ ಜಮೀನುಗಳಿಗೆ ತೆರಳುವ ಅಡ್ಡ ರಸ್ತೆಯಲ್ಲಿ ದೇವರ ಬೆಳಕೆರೆ ಪಿಕಪ್ ಕಾಲುವೆ ಹಾದು ಹೋಗಿದೆ. ಈ ಕಾಲುವೆ ಮೇಲೆ ನಿರ್ಮಿ ಸಿದ್ದ ಸೇತುವೆಯೇ ಕುಸಿದು ಬಿದ್ದಿದೆ. ಇದರಿಂದಾಗಿ ಎರಡು ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ತೆರಳಲು ತೊಂದರೆಯುಂಟಾಗಿದೆ.
ವಿಷಯ ತಿಳಿದ ಶಾಸಕ ಬಿ.ಪಿ.ಹರೀಶ್ ಅವರು, ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದರು.
ಆದಷ್ಟು ಬೇಗ ಸೇತುವೆಯನ್ನು ದುರಸ್ತಿ ಮಾಡಿಸಿ, ರೈತರಿಗೆ ಅನುಕೂಲ ಮಾಡಿಕೊಡುವಂತೆ ಅಲ್ಲಿಂದಲೇ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ಸೂಚಿಸಿದರು.