ಹೊನ್ನಾಳಿ, ಜು. 24- ತಾಲ್ಲೂಕಿನ ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ (61) ಇಂದು ಮುಂಜಾನೆ ಲಿಂಗೈಕ್ಯರಾದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಶಿವಮೊಗ್ಗ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಜೂನ್ 6, 1963ರಲ್ಲಿ ಚಂದ್ರಶೇಖರಯ್ಯ ಹಾಗೂ ಪಾರ್ವತಮ್ಮ ಅವರ ದ್ವಿತೀಯ ಪುತ್ರರಾಗಿ ಜನಿಸಿದ ಇವರು ಧಾರವಾಡದ ಮುರುಘಾ ಮಠದಲ್ಲಿ ಬಿ.ಎ. ವ್ಯಾಸಂಗ ಮಾಡಿದ್ದರು. ಹೊಟ್ಯಾಪುರದ ಹಿರೇಮಠಕ್ಕೆ 3 ನೇ ಗುರು ಗಳಾಗಿ 2002ರಲ್ಲಿ ಪಟ್ಟಾಭಿಷೇಕ ನೆರವೇರಿಸಲಾಗಿತ್ತು. ರಾಮಪುರದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಕೊರೊನಾದಿಂದ ನಿಧನರಾದ ಬಳಿಕ ಶ್ರಿಗಳು ನೊಂದು ಕೊಂಡಿದ್ದರು. ನಾಳೆ ಮಂಗಳವಾರ ಮಧ್ಯಾಹ್ನದವರೆಗೆ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, 12ಕ್ಕೆ ಹೊಟ್ಯಾಪುರದಲ್ಲಿ ಉಜ್ಜಯಿನಿ ಜಗದ್ಗುರುಗಳ ನೇತೃತ್ವದಲ್ಲಿ ವಿಧಿ ವಿಧಾನ ಕಾರ್ಯಗಳು ನೆರವೇರಲಿವೆ ಎಂದು ಮಠದ ಮೂಲಗಳು ತಿಳಿಸಿವೆ.