ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀ ಚನ್ನವೀರ ಸ್ವಾಮೀಜಿ
ದಾವಣಗೆರೆ, ಜು. 23- ಪಂಡಿತ ಪುಟ್ಟರಾಜ ಗವಾಯಿಗಳವರ ಸಾಹಿತ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಿ ಎಂದು ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀ ವೇ.ಚನ್ನವೀರ ಸ್ವಾಮೀಜಿ ಮನವಿ ಮಾಡಿದರು.
ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇವರ ವತಿಯಿಂದ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ `ಪುಟ್ಟರಾಜ ಗುರು ವಚನ ಪ್ರಭಾ’ ಸಾವಿರದ ಸಾಹಿತ್ಯ ಸಾವಿರ ಮನೆ ಮನಗಳಿಗೆ ಅಭಿಯಾನದ ಚಾಲನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂ.ಪುಟ್ಟರಾಜ ಗವಾಯಿಗಳ ಸಾಹಿತ್ಯವನ್ನು ಮನೆ, ಮನಗಳಿಗೆ ತಲುಪಿಸುವ ಅಭಿಯಾನವನ್ನು ಮೊದಲನೆಯದಾಗಿ ಗದಗದಲ್ಲಿ ನಡೆಸಲಾಗಿತ್ತು. ಇದೀಗ ಎರಡನೇ ಅಭಿಯಾನವನ್ನು ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು. ಹುಟ್ಟುಹಬ್ಬದ ಆಚರಣೆ ಮೊದಲಾದ ಶುಭ ಕಾರ್ಯಗಳಿಗೆ ಉಡುಗೊರೆ ಬದಲಾಗಿ ಪಂ.ಪುಟ್ಟರಾಜ ಗವಾಯಿಗಳ ಸಮಗ್ರ ಸಾಹಿತ್ಯದ ಕೃತಿಗಳನ್ನೇ ಉಡುಗೊರೆಯಾಗಿ ನೀಡುವಂತೆ ಕರೆ ನೀಡಿದರು.
ಪಂ.ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ತ್ರಿಭಾಷಾ ಪಂಡಿತರಾಗಿದ್ದರು. ಎಲ್ಲಾ ವೀರಶೈವ ಮಠಗಳಲ್ಲಿ ಪುರಾಣ ಪ್ರವಚನಗಳನ್ನು ನಡೆಸಿಕೊಡುತ್ತಿದ್ದರು ಎಂದರು.
ಪುಟ್ಟರಾಜ ಗವಾಯಿಗಳವರ ವಚನ ವಿಶ್ಲೇಷಣೆ ಇರುವ ಅವರ ಕೃತಿಗಳನ್ನು ಬಿಡುಗಡೆ ಮಾಡಿ ರಾಜ್ಯದೆಲ್ಲೆಡೆ ಪಸರಿಸಬೇಕೆಂಬ ಈ ಅಭಿಯಾನಕ್ಕೆ ಚಾಲನೆ ನೀಡುವಲ್ಲಿ ದಾವಣಗೆರೆ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿ ಗಳು ಯಶಸ್ವಿಯಾಗಿದ್ದಾರೆ ಎಂದು ಶ್ಲ್ಯಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ 20ಕ್ಕೂ ಹೆಚ್ಚು ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಪುಟ್ಟರಾಜ ಗವಾಯಿಗಳವರ ಮೇಲೆ ರಚಿಸಿದ ಕವಿತೆಗಳನ್ನು ಕವಿಗಳು ಓದಿದರು. ಶ್ರೀಮತಿ ವಾಣಿ ಬಸವರಾಜ್ ಕವಿಗೋಷ್ಠಿ ನಡೆಸಿಕೊಟ್ಟರು. ಭಾಗವಹಿಸಿದ್ದ ಕವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿ ಸ್ವಾಮಿ, ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಅಣಬೇರು ಮಂಜಣ್ಣ, ಸಂಗೀತ ಶಿಕ್ಷಕರೂ, ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳೂ ಆದ ಶಿವಬಸಯ್ಯ ಚಿರಂತಿಮಠ, ಶ್ರೀಮತಿ ಸುಧಾ ಮಂಜುನಾಥ, ಜಿಲ್ಲಾಧ್ಯಕ್ಷ ವಿನಾಯಕ ಪಿ.ಬಿ, ಎಂ.ಕೆ. ರೇವಣಸಿದ್ದಪ್ಪ, ಜಿ. ಹಾಲೇಶ್ ಇತರರು ಉಪಸ್ಥಿತರಿದ್ದರು.
ಶಿವಬಸಯ್ಯ ಚರಂತಿಮಠ ಸ್ವಾಗತಿಸಿದರು. ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಶ್ರೀಮತಿ ಸುಮಾ ಹಡಪದ ನಿರೂಪಿಸಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸತೀಶ್ ವಂದಿಸಿದರು. ಕೃಷ್ಣಮೂರ್ತಿ ಸಾವಿತ್ರ, ಟಿ.ಎಂ. ವೀರಯ್ಯ ರುದ್ರಮ್ಮ ಹಾಗೂ ಮಹೇಶ್ ಶೆಟ್ಟಿ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.