ಕುರುಬ ಸಮುದಾಯ ಪರಿಶಿಷ್ಟ ಪಂಗಡ ಪಟ್ಟಿಗೆ: ಹಾಲುಮತ ಮಹಾಸಭಾ ಸ್ವಾಗತ

ದಾವಣಗೆರೆ, ಜು.23-  ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು  ಮಾಡಿರುವುದನ್ನು  ಹಾಲುಮತ ಮಹಾಸಭಾ ಸ್ವಾಗತಿಸಿ, ಅಭಿನಂದಿಸುತ್ತದೆ ಎಂದು ಮಹಾಸಭಾ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.

 ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು  ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ, ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಸ್ವಾತಂತ್ರ್ಯ ಪೂರ್ವದಿಂದ ಹಾಗೂ ಇಂದಿನ ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿರುವ  ಕುರುಬ ಸಮುದಾಯವನ್ನು ರಾಜ್ಯದ ಎಲ್ಲ  ಜಿಲ್ಲೆಗಳಿಗೆ ವಿಸ್ತರಿಸದೇ ಇರುವುದರಿಂದ  ಆಗಿರುವ  ಅನ್ಯಾಯ  ಸರಿಪಡಿಸಲು ಶ್ರೀ ನಿರಂಜನಾನಂದಪುರಿ  ಮಹಾಸ್ವಾಮಿಗಳ ಮಾರ್ಗದರ್ಶನದೊಂದಿಗೆ  2015ರಿಂದ ನಿರಂತರವಾದ ಹೋರಾಟ, ಸಮಾವೇಶ, ಧರಣಿಗಳ ಮೂಲಕ ಒತ್ತಾಯಿಸುತ್ತಾ ಬರಲಾಗಿತ್ತು ಎಂದರು.

ಮಹಾಸಭಾದ ಜಿಲ್ಲಾಧ್ಯಕ್ಷ ಸಿ. ವೀರಣ್ಣ ಮಾತನಾಡಿ,  ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಶಿಫಾರಸ್ಸನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೂ ಹಾಲುಮತ ಮಹಾಸಭಾ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದರು.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಶಿಫಾರಸ್ಸನ್ನು  ಕೂಡಲೇ ಅಂಗೀಕರಿಸಬೇಕು. ಲೋಕಸಭೆ  ಹಾಗೂ  ರಾಜ್ಯಸಭೆಯಲ್ಲಿಯೂ ಅಂಗೀಕರಿಸಿ  ರಾಜ್ಯದ ಎಲ್ಲ  ಕುರುಬರಿಗೆ  ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿ ದೆಹಲಿ ಚಲೋ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಬೆಳಗಾವಿಯಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ  ಹೋರಾಟದ ದಿನಾಂಕ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಮಹಾಸಭಾದ ಪ್ರಮುಖರಾದ ಶ್ರೀಮತಿ ಶಿವಗಂಗಾ, ದೀಟೂರು ಚಂದ್ರು, ಸಲ್ಲಳ್ಳಿ ಹನುಮಂತಪ್ಪ, ಜಿ. ಷಣ್ಮುಖಪ್ಪ, ಘನರಾಜ್, ಎಸ್.ಎಂ. ಸಿದ್ದಲಿಂಗಪ್ಪ, ಪರಮೇಶ್ ಆರ್.ಬಿ., ಎನ್.ಹೆಚ್. ರವಿಂದ್ರಬಾಬು, ಹೆಚ್.ಆರ್. ಪ್ರಭು, ತಿಪ್ಪೇಶ್ ಆವರಗೆರೆ, ಚೇತನ್ ವಿ. ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!