ಮಹಿಳೆಯರಿಗೆ ರಕ್ಷಣೆ ನೀಡದ ಮಣಿಪುರ ಸರ್ಕಾರವನ್ನು ಕಿತ್ತು ಹಾಕುವಂತೆ ಆಗ್ರಹ

ದಾವಣಗೆರೆ, ಜು. 21- ಮಣಿಪುರದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ಖಂಡನೀಯವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ ಮಣಿಪುರ ಸರ್ಕಾರವನ್ನು ರಾಷ್ಟ್ರಪತಿಗಳು ಕಿತ್ತು ಹಾಕಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ.ಬಸವರಾಜ್ ಆಗ್ರಹಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ದೇಶವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಪ್ರಧಾನಿ ಮೋದಿ ಘಟನೆ ನಡೆದಿರುವ ಕುರಿತು ದೇಶದ ಕ್ಷಮೆ ಯಾಚಿಸಬೇಕು. ಮಹಿಳೆಯ ರಕ್ಷಣೆಗೆ ಸುಪ್ರೀಂ ಕೋರ್ಟ್ ಧಾವಿಸಬೇಕು ಎಂದು ಒತ್ತಾಯಿಸಿದರು.

ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಭಾರಿಸುತ್ತಿದ್ದ ಎಂಬಂತೆ ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಪ್ರಧಾನಿ ಮೋದಿ ಅಧಿಕಾರದ ಆಸೆಗಾಗಿ ಕರ್ನಾಟಕದ ಉಡುಪಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂದು ಬಸವರಾಜ್ ಆರೋಪಿಸಿದರು.

ದೇಶದಲ್ಲಿ ಮಹಿಳೆಯರಿಗೆ ಶೇ.1ರಷ್ಟು ಸುರಕ್ಷತೆಯಿಲ್ಲವಾಗಿದೆ. ಮಣಿಪುರ ಘಟನೆಗೆ ಸಂಬಂಧಿಸಿದಂತೆ ಮೋದಿ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ. ಇಂತಹ ಪ್ರಧಾನ ಮಂತ್ರಿ ಪಡೆದಿರುವುದು ದೇಶದ ದೌರ್ಭಾಗ್ಯ ಎಂದು ಹೇಳಿದರು.

ಮಣಿಪುರದ ಘಟನೆ ನಡೆದ ಮೇಲೂ ಬಿಜೆಪಿಯ ಪ್ರಭಾವಿ ಮಹಿಳಾ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಏಕೆ ರಾಜ್ಯ ಹಾಗೂ ಕೇಂದ್ರದ ಆಡಳಿತ ವೈಫಲ್ಯದ ಬಗ್ಗೆ ಮಾತನಾಡುತ್ತಿಲ್ಲ? ಇವರು ಕೇವಲ ಬೂಟಾಟಿಕೆ ಮಾಡುತ್ತಿದ್ದಾರೆ ಎಂದು  ಬಸವರಾಜ್ ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಮಂಜುನಾಥ್, ನಂಜಾನಾಯ್, ಬಿ.ಎನ್. ವಿನಾಯಕ, ಎಂ.ಕೆ. ಲಿಯಾಖತ್ ಅಲಿ, ಗುರುಮೂರ್ತಿ, ಫಾರೂಕ್, ಬಸವರಾಜ್, ನವೀನ್ ಇತರರು ಉಪಸ್ಥಿತರಿದ್ದರು.

error: Content is protected !!