ದಾವಣಗೆರೆ, ಜು. 13- ಆಯುರ್ವೇದ ಹಾಗೂ ಅಲೋಪಥಿ ವೈದ್ಯ ಪದ್ಧತಿಯ ನಡುವೆ ನಡೆಯುವ ನೈಜ ಘಟನೆಗಳನ್ನಾಧರಿಸಿ ನಿರ್ಮಿಸಿರುವ `ಮಧುರ ಕಾವ್ಯ’ ಕನ್ನಡ ಚಲನಚಿತ್ರ ಇದೇ ದಿನಾಂಕ 21 ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ನಾಟಿ ವೈದ್ಯ, ನಾಯಕ ನಟ, ನಿರ್ದೇಶಕ ಮಧುಸೂದನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಯಕಿಯ ಪಾತ್ರವಿಲ್ಲದ ಈ ಚಿತ್ರಕ್ಕೆ ಸತೀಶ್ ಮೌರ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಯಭಾಸ್ಕರ್ ಅವರ ಛಾಯಾಗ್ರಹಣವಿದ್ದು, ಚಿತ್ರದಲ್ಲಿ ಮೂರು ಹಾಡುಗಳಿದ್ದು, ರಾಜೇಶ್ ಕೃಷ್ಣನ್ ಸೇರಿದಂತೆ ಹೆಸರಾಂತ ಗಾಯಕರು ಹಾಡಿದ್ದಾರೆ. ಅಣ್ಣಪ್ಪಸ್ವಾಮಿ, ನಾಚಪ್ಪ, ಜಗನ್ನಾಥ ಶೆಟ್ಟಿ, ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರು.
ಹಿಂದಿನ ಕಾಲದಲ್ಲಿ ನಾಟಿ ವೈದ್ಯ ಪದ್ಧತಿ ಜನಪ್ರಿಯತೆ ಗಳಿಸಿತ್ತು. ಆಗ ಹಣ ಮಾಡುವ ಆಸೆ ಇರಲಿಲ್ಲ. ಆಯುರ್ವೇದವನ್ನು ಉಳಿಸಬೇಕು. ನಾಟಿ ವೈದ್ಯ ಪದ್ಧತಿಯನ್ನು ಬೆಳೆಸಬೇಕೆಂಬ ಸುದುದ್ಧೇಶದಿಂದ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಆಯುರ್ವೇದ ಸಂಪ್ರದಾಯ ಉಳಿಯಬೇಕೆಂಬುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ನಾಟಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲಾಭಿ ನಡೆಸುವವರ ವಿರುದ್ಧ ಹೋರಾಟ ನಡೆಸಿ ನಾಟಿವೈದ್ಯ ಪದ್ಧತಿಯನ್ನು ರಕ್ಷಿಸುವಂತಹ ಪಾತ್ರವಾಗಿದೆ. ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದೇನೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀ ಕರಣ ನಡೆಸಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಸತೀಶ್ ಮೌರ್ಯ, ನಟರಾದ ಅಣ್ಣಪ್ಪಸ್ವಾಮಿ, ರಾಜು ನಾಯಕ್ ಉಪಸ್ಥಿತರಿದ್ದರು.