ಸದನದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ
ಬೆಂಗಳೂರು, ಜು. 17- ಈ ಹಿಂದೆ 22 ಕೆರೆಗಳ ಏತ ನೀರಾವರಿ ಯೋಜನೆಯಡಿ ಅಳವಡಿಸಲಾಗಿದ್ದ ಪೈಪ್ಲೈನ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅದನ್ನು ಪುನರ್ ಪೈಪ್ ಲೈನ್ ಅಳವಡಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹಿಸಿದರು.
ಬಜೆಟ್ ಮಂಡನೆಯ ಮೇಲೆ ಸದನದಲ್ಲಿ ಪ್ರಥಮ ಬಾರಿಗೆ ಮಾತನಾಡಿದ ಅವರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಿದ್ದು, ಪಡಿತರ ವ್ಯವಸ್ಥೆಗೆ ಮೆಕ್ಕೆಜೋಳವನ್ನು ಸಹ ಸೇರ್ಪಡೆ ಮಾಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಸಂವಿಧಾನವನ್ನು ನಾವೆಲ್ಲರೂ ನಿತ್ಯ ನೆನಪಿಸಿಕೊಳ್ಳಲೇಬೇಕಾಗಿದೆ. ಭಾರತದ ಸಂವಿಧಾನ ಶಾಸಕನಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದಕ್ಕೆ ಕಾರಣ ಡಾ. ಬಿ.ಆರ್. ಅಂಬೇಡ್ಕರ್ ಎಂದರು.
ನಗರ ಪ್ರದೇಶದಲ್ಲಿ ಸ್ವಚ್ಛತೆಗೆ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವಂತೆ ಗ್ರಾಮೀಣ ಪ್ರದೇಶದಲ್ಲೂ ಸಹ ಪೌರ ಕಾರ್ಮಿಕರನ್ನು ನೇಮಕ ಮಾಡುವ ಮೂಲಕ ಗ್ರಾಮೀಣ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಬೇಕಾಗಿದೆ. ಸ್ವಚ್ಛತೆಯಿಲ್ಲದ ಕಾರಣ ರೈತರು, ಗ್ರಾಮೀಣ ಜನರು ಸಹ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರ ಗ್ರಾಮೀಣ ನೈರ್ಮಲ್ಯದ ಕಡೆಗೂ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಹಳ್ಳಿಗಳ ಅಭಿವೃದ್ಧಿ ಕಡೆಗೂ ಬಜೆಟ್ನಲ್ಲಿ ಅವಕಾಶ ನೀಡಬೇಕು. ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.