ಪಡಿತರ ಚೀಟಿದಾರರಿಗೆ ಖಾತೆ ಮೂಲಕ ಹಣ: ಡಿಸಿ

ಪಡಿತರ ಚೀಟಿದಾರರಿಗೆ ಖಾತೆ ಮೂಲಕ ಹಣ: ಡಿಸಿ

ದಾವಣಗೆರೆ, ಜು.13- ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ (ಪಿ.ಹೆಚ್.ಹೆಚ್) ಪಡಿತರ ಚೀಟಿಯನ್ನು ಹೊಂದಿ ರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್‍ಖಾತೆಗೆ  ಹಣ ಪಾವತಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

 ಸರ್ಕಾರದ ಆದೇಶದನ್ವಯ 5 ಕೆ.ಜಿ ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿಗೆ 34 ರೂ. ರಂತೆ ಪ್ರತಿ ಸದಸ್ಯರಿಗೆ 170 ರೂ. ನಂತೆ ನಗದು ವರ್ಗಾವಣೆ ಮಾಡಲಾಗು ತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿದ್ದು, ಪಡಿತರ ಆಹಾರ ಧಾನ್ಯವನ್ನು ಪಡೆಯದೇ ಇರುವವರು  ಯೋಜನೆಗೆ ಅರ್ಹರಿರುವುದಿಲ್ಲ.

ಜಿಲ್ಲೆಯಲ್ಲಿ ಒಟ್ಟು 42,258 ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್‍ಖಾತೆಯನ್ನು ಹೊಂದಿಲ್ಲ. ಕೆಲವರು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿಲ್ಲ. ಇನ್ನೂ ಕೆಲವರು ಬ್ಯಾಂಕ್ ಖಾತೆ  ತೆರೆದಿಲ್ಲ. 

  ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ ನಂತರ ಹಾಗೂ   ಸಕ್ರಿಯ ಬ್ಯಾಂಕ್‍ಖಾತೆ ಹೊಂದಿಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾತೆ ತೆರೆದರೆ ಮುಂದಿನ ಮಾಹೆಯ ಯೋಜನೆಗೆ ಅರ್ಹರಾಗಿರುತ್ತಾರೆ.  

ಆದ್ದರಿಂದ ಪಡಿತರ ಚೀಟಿದಾರರು ಸಮೀಪದ ಅಂಚೆ ಕಛೇರಿಗಳಲ್ಲಿ ಜುಲೈ 20 ರೊಳಗಾಗಿ ಐ.ಪಿ.ಪಿ.ಬಿ ಖಾತೆ ತೆರೆಯುವ ಮೂಲಕ ಸರಳವಾಗಿ ನಗದು ವರ್ಗಾವಣೆ ಸೌಲಭ್ಯ ಪಡೆಯಬಹುದು. ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳನ್ನು, ತಾಲ್ಲೂಕು ಕಛೇರಿಗಳನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

error: Content is protected !!