ದಾವಣಗೆರೆ, ಜು. 12- ಸಾಮಾಜಿಕ ಬಾಂಧವ್ಯದ ಆಶಯ ಹೊಂದಿರುವ ಮುಸ್ಲಿಂ ಸಮುದಾಯದ ಧರ್ಮ ಗುರುಗಳು, ಲೇಖಕರು, ಚಿಂತಕರು, ಸಾಹಿತಿಗಳು ಮತ್ತು ಸಾಧಕರನ್ನು ಒಳಗೊಂಡ `ಮುಸ್ಲಿಂ ಬಾಂಧವ್ಯ ವೇದಿಕೆ’ಯ ವಾರ್ಷಿಕ ಪದ ಪ್ರದಾನ ಸಮಾರಂಭ ನಗರದ ಬಾಪೂಜಿ ಸಭಾ ಭವನದಲ್ಲಿ ನಡೆಯಿತು.
ವೇದಿಕೆಯ ನೂತನ ಪದಾಧಿಕಾರಿಗಳಿಗೆ ನಿವೃತ್ತ ನ್ಯಾಯಾಧೀಶ ವಿಜಯಪುರದ ನಬಿರಸೂಲ್ ಮಹಮದಾಪುರ ಪದಪ್ರದಾನಗೈದರು. ದಾವಣಗೆರೆಯ ನ್ಯಾಯವಾದಿ ಅನೀಸ್ ಪಾಷಾ ಅಧ್ಯಕ್ಷರಾಗಿ, ಉಡುಪಿಯ ಮುಷ್ತಾಕ್ ಹೆನ್ನಾಬೈಲ್ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಈ ವೇಳೆ ಮಾತನಾಡಿದ ನಬಿರಸೂಲ್ ಮಹಮದಾಪುರ ಅವರು, ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ಬಹಳಷ್ಟು ವೇದಿಕೆ-ಸಂಘಟನೆಗಳನ್ನು ರಾಜ್ಯ ಕಂಡಿದೆ. ಆದರೆ ಈ ವೇದಿಕೆ ಸಮುದಾಯದ ಅತ್ಯಂತ ಪ್ರಜ್ಞಾವಂತರು ಮತ್ತು ಪ್ರಬುದ್ಧ ಸಾಧಕರಿಂದ ಕೂಡಿದ ಸಂಘಟನೆಯಾಗಿದೆ ಎಂದರು.
ಸಮುದಾಯದ ಸರ್ವಕ್ಷೇತ್ರದ ಆಯ್ದ ಸಾಧಕರನ್ನು ಹೊಂದಿರುವ ರಾಜ್ಯದ ಬೇರೆ ಬೇರೆ ಭಾಗದವರಿಂದ ಕೂಡಿದ ಮುಸ್ಲಿಂ ಸಮುದಾಯದ ಮೊದಲ ಸಂಘಟನೆ ಇದಾಗಿದೆ ಎಂದು ಹೇಳಿದರು.
ವೇದಿಕೆಯ ನೂತನ ಅಧ್ಯಕ್ಷ ಅನಿಸ್ ಪಾಷಾ ಮಾತನಾಡಿ, ಯಾವುದೇ ಒಂದು ಸಮುದಾಯ ಮುಂದುವರೆಯಬೇಕಾದರೆ, ಆ ಸಮುದಾಯದ ನಾಯಕರ ಮುಂದಾಳತ್ವದ ಅವಶ್ಯಕತೆ ಇದೆ. ಆದರೆ ಮುಸ್ಲಿಂ ಸಮುದಾಯ ದಲ್ಲಿ ಈಗ ನಾಯಕತ್ವದ ಕೊರತೆ ಇದೆ. ಈ ಸಂಘಟನೆಯು ಮುಂದಿನ ದಿನಗಳಲ್ಲಿ ಪ್ರತಿಯೊಂದು ಸಮುದಾಯದ ಮಧ್ಯ ಬಾಂಧವ್ಯದ ಕೊಂಡಿಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
2024-25 ನೇ ಸಾಲಿಗೆ ಆಯ್ಕೆಯಾದ ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ ನೂತನ ಅಧ್ಯಕ್ಷರ ಪರಿಚಯ ಮಾಡಿದರು. ಸದಸ್ಯ ಅಸ್ಲಮ್ ಹೈಕಾಡಿ ನೂತನ ಕಾರ್ಯದರ್ಶಿಯವರ ಪರಿಚಯ ಮಾಡಿದರು. ಕಾರ್ಯದರ್ಶಿ ಲೇಖಕ ಮುಷ್ತಾಕ್ ಹೆನ್ನಾಬೈಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸೈಯದ್ ನಿಜಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಕ್ ರೌಫ್ ವಂದಿಸಿದರು.
ವೇದಿಕೆಯಲ್ಲಿ ಧರ್ಮಗುರುಗಳು ಹಾಗೂ ವೇದಿಕೆಯ ಗೌರವಾಧ್ಯಕ್ಷರಾದ ಮಂಗಳೂರಿನ ಎಸ್. ಬಿ. ದಾರಿಮಿ, 2024-25ರ ಸಾಲಿಗೆ ಆಯ್ಕೆಯಾದ ಅಧ್ಯಕ್ಷ ಹಾವೇರಿಯ ಹಿರಿಯ ಕವಿ ಖಾದರ್ ಮೊಹಿಯುದ್ದೀನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸೌಹಾರ್ದ ಕಾರ್ಯಕ್ರಮದ ಭಾಗವಾಗಿ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿಗಳನ್ನು ಶ್ರೀಮಠದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿತು.