ಚನ್ನಗಿರಿ, ಜು. 12- ನಮ್ಮ ಮನೆಯಂತೆ ಹಾಸ್ಟೆಲ್ಲನ್ನು, ವಿದ್ಯಾರ್ಥಿನಿಯರನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಆಹಾರ ನೀಡುವ ಜೊತೆಗೆ ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳು ತಲುಪಬೇಕೆಂದು ಶಾಸಕ ಬಸವರಾಜು ಶಿವಗಂಗಾ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿನಿಯರೊಂದಿಗೆ ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಚರ್ಚಿಸಿದರು. ಗುಣ ಮಟ್ಟದ ಆಹಾರ ವಿತರಣೆ ಮತ್ತು ಮಾಡುವ ಕೆಲಸದಲ್ಲಿ ಲೋಪ ಕಂಡು ಬಂದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಅಡುಗೆಗೆ ಬಳಸುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಬೇಕು. ಆಹಾರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೂ ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಜವಾಬ್ದಾರರು. ಓದುವ ಬಡ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. ಊಟದ ಸಂದರ್ಭದಲ್ಲಿ ವಾರ್ಡನ್ ಕಡ್ಡಾಯವಾಗಿ ಹಾಜರಿರಬೇಕು. ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಶೌಚಾಲಯ ಸೇರಿದಂತೆ ಅಡುಗೆ ಮನೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಮಕ್ಕಳಂತೆ ಹಾಸ್ಟೆಲ್ ವಿದ್ಯಾರ್ಥಿನಿ ಯರನ್ನು ನೋಡಿಕೊಳ್ಳಬೇಕೆಂದರು.