ಶಾಸಕ ಬಸವರಾಜು ವಿ. ಶಿವಗಂಗಾ ಅವರು ನಮಗೆ ಕರೆ ಮಾಡಿ ನಮ್ಮ ಯೋಗಾಕ್ಷೇಮ ವಿಚಾರಿಸಿದರು. ಎಲ್ಲರ ಬಗ್ಗೆ ಮಾಹಿತಿ ಪಡೆದು, ಏನೇ ಸಮಸ್ಯೆಯಿದ್ದರೂ ನನ್ನನ್ನು ಸಂಪರ್ಕಿಸಿ ಎಂದು ನಮಗೆ ತಿಳಿಸಿದರು. ನಮ್ಮ ಬಗ್ಗೆ ಶಾಸಕರಿಗೆ ಇರುವ ಕಾಳಜಿ ನೋಡಿ ತುಂಬಾ ಸಂತೋಷವಾಯಿತು.
– ಪ್ರಕಾಶ್ ಅಜ್ಜಿಹಳ್ಳಿ
ಚನ್ನಗಿರಿ, ಜು.11- ಕ್ಷೇತ್ರದ ಜನರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದಕ್ಕೆ ನಿದರ್ಶನ ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ ಅವರು ಎಂದರೆ ತಪ್ಪಾಗುವುದಿಲ್ಲ.
ತಮ್ಮ ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆ ಹೀಗೆ ಯೋಚನೆ ಮಾಡುವ ಶಾಸಕರು, ಅಮರನಾಥ ಯಾತ್ರೆಗೆ ತೆರಳಿದ ಕ್ಷೇತ್ರದ ಜನರ ಬಗ್ಗೆಯೂ ಕಾಳಜಿ ಹೊಂದಿದ್ದಾರೆ.
ಚನ್ನಗಿರಿ ಕ್ಷೇತ್ರದಿಂದ ಈ ಬಾರಿ ಎಷ್ಟು ಮಂದಿ ತೆರಳಿದ್ದಾರೆ ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಅವರನ್ನು ಫೋನ್ ಕರೆ ಮೂಲಕ ಸಂಪರ್ಕಿಸಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಅಮರನಾಥ ಸೇರಿದಂತೆ ಉತ್ತರ ಭಾರತ ಪ್ರವಾಸದಲ್ಲಿವವರಿಗೆ ಶುಭ ಕೋರಿ, ಯಾವುದೇ ಸಮಯದಲ್ಲಿ ನಿಮಗೆ ಸಣ್ಣ ಸಮಸ್ಯೆಯಾದರೂ ನನಗೆ ನೇರವಾಗಿ ಫೋನ್ ಕರೆ ಮಾಡಿ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಕ್ಷೇತ್ರದಿಂದ ಅಜ್ಜಿಹಳ್ಳಿಯ ಪ್ರಕಾಶ್, ವಸಂತ ಕುಮಾರ್, ರೇವಣ್ಣ, ಆದಿತ್ಯ, ಪ್ರಹ್ಲಾದ್, ನಲ್ಲೂರಿನ ಸತೀಶ್, ಚನ್ನಗಿರಿ ಪಟ್ಟಣದ ರಂಗಯ್ಯ, ತಿಪ್ಪಗೊಂಡನ ಹಳ್ಳಿಯಿಂದ ಮಂಜುನಾಥ್ ಡಿ.ಎಂ. ಹಳ್ಳಿಹಾಳು (ಪೆನ್ನಸಮುದ್ರ) ಗ್ರಾಮದ ಜಿ.ಎಸ್. ನಾಗರಾಜು ಅವರು ಇದೇ 7 ರಂದು ಶ್ರೀನಗರಕ್ಕೆ ತೆರಳಿ ಅಲ್ಲಿಂದ ಅಮರನಾಥಕ್ಕೆ ತೆರಳಿ, ದೇವರ ದರ್ಶನ ಪಡೆದು ಶ್ರೀನಗರದ ಮೂಲಕ ಕರ್ನಾಟಕಕ್ಕೆ ವಾಪಸ್ ಬರುತ್ತಿದ್ದಾರೆ.