ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿಕೊಳ್ಳಬೇಕು

ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿಕೊಳ್ಳಬೇಕು

ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಆರ್.ಬಿ. ವಸಂತಕುಮಾರಿ 

ದಾವಣಗೆರೆ, ಜು. 11 – ಪ್ರಸ್ತುತ ಭಾರತದ ಜನಸಂಖ್ಯೆ 135 ಕೋಟಿಗೂ ಅಧಿಕವಾಗಿದೆ. ಜನಸಂಖ್ಯೆಯಲ್ಲಿ ಭಾರತ ದೊಡ್ಡ ದೇಶವಾಗಿ ಬೆಳೆಯುತ್ತಿದೆ. ಈ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿಕೊಳ್ಳಬೇಕು ಇದು ನಮ್ಮ ಕೈಯಲ್ಲಿದೆ ಇದರ ಸದ್ಬಳಕೆ ಮಾಡಿ ಕೊಳ್ಳಬೇಕು. ಈ ಮಾನವ ಸಂಪನ್ಮೂಲ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ  ಶ್ರೀಮತಿ ಆರ್.ಬಿ. ವಸಂತಕುಮಾರಿ  ತಿಳಿಸಿದರು.

ಆನಗೋಡು ಸಮೀಪದ ಉಳುಪನಕಟ್ಟೆ ಗ್ರಾಮದಲ್ಲಿರುವ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಇಂದು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯ ಕಡಿಮೆಯಾಗುತ್ತಿದೆ. ಪ್ರಬಂಧ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯವನ್ನು ವೃದ್ಧಿಸುತ್ತದೆ. ಜನಸಂಖ್ಯಾ ಸ್ಫೋಟದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮತ್ತು ಪರಿಹಾರೋಪಾಯಗಳ ಕುರಿತಂತೆ ತಮ್ಮ ಆಲೋಚನೆಗಳನ್ನು ಬರವಣಿಗೆ ಮೂಲಕ ಅಭಿವ್ಯಕ್ತಿಗೊಳಿಸುವುದಕ್ಕೆ ಈ ಪ್ರಬಂಧ ಸ್ಪರ್ಧೆ ಒಳ್ಳೆಯ ಅವಕಾಶವನ್ನು ಒದಗಿಸಿಕೊಡುತ್ತದೆ ಎಂದು ಹೇಳಿದರು. 

ಕುರ್ಕಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿ. ಜಿ. ಜಗದೀಶ್ ಕೂಲಂಬಿ ಮಾತ ನಾಡಿ, ಜನಸಂಖ್ಯೆಯು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರನ್ನು ಸೂಚಿಸುತ್ತದೆ. ನಮ್ಮ ದೇಶದ ಜನಸಂಖ್ಯೆ ತ್ವರಿತ ಬೆಳವಣಿಗೆಯು ಇಂದು ಕಳವಳಕ್ಕೆ ಕಾರಣವಾಗಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕೃಷಿ ಕೈಗಾರಿಕೆ ವೈಜ್ಞಾನಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ.1987 ರ ಜುಲೈ 11 ರಂದು ವಿಶ್ವದ ಜನಸಂಖ್ಯೆ ಐದು ಬಿಲಿಯನ್ ತಲುಪಿತು. ಇದರ ಅಂಗವಾಗಿ ವಿಶ್ವಸಂಸ್ಥೆ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಎಂದು ಘೋಷಿಸಲಾಯಿತು. ಪ್ರಯುಕ್ತ ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

 ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಿಂದುಶ್ರೀ ಕೆ. ಸರ್ಕಾರಿ ಪ್ರೌಢಶಾಲೆ ಕಬ್ಬೂರು, ದ್ವಿತೀಯ ಬಹುಮಾನವನ್ನು ಹರ್ಷಿತ ಎಚ್ಎನ್ ಸರ್ಕಾರಿ ಪ್ರೌಢಶಾಲೆ ಹಾಲವರ್ತಿ, ತೃತಿಯ ಬಹುಮಾನವನ್ನು ಅನು ಎನ್. ಪಿ. ಸರ್ಕಾರಿ ಪ್ರೌಢಶಾಲೆ ಕಂದನಕೋವಿ ಇವರು ಪಡೆದರು.  

 ಪ್ರಬಂಧ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಮಾಜ ವಿಜ್ಞಾನ ಶಿಕ್ಷಕರಾದ ವಿ. ಪರಮೇಶ್ವರಯ್ಯ, ಬಾಬು ಬುಡನ್ ಬಿ, ಹಾಗೂ ಸಿ ಜಿ ಜಗದೀಶ್ ಕೂಲಂಬಿ ಕಾರ್ಯ ನಿರ್ವಹಿಸಿದರು.

 ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರುಗಳಾದ ಮಾರುತೇಶ್ ಎಸ್, ಸುಧಾಕರ ಜಿಎನ್, ಬಾಬು ಬುಡೇನ್, ಪ್ರಕಾಶ್ ಕೆಎಸ್, ಹನುಮಂತಪ್ಪ ಕೆ, ರಾಧಾ ಎಂ ಎಚ್,  ವಿರೂಪಾಕ್ಷಿ ಹೆಚ್, ಪರಮೇಶ್ವರಯ್ಯ ವಿ, ಸಿ ಮಹಾಂತೇಶ್, ಟೆಕ್ನಿಕಲ್ ಅಸಿಸ್ಟೆಂಟ್  ಪ್ರವೀಣ್ ಮುಂತಾದವರು ಭಾಗವಹಿಸಿದ್ದರು.

 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕ್ಯುರೇಟರ್ ಅರುಣ್ ನಿರೂಪಿಸಿದರು. ಶಿಕ್ಷಕ ಎಚ್ ವಿರೂಪಾಕ್ಷಿ ವಂದಿಸಿದರು.

error: Content is protected !!