ಭಾರತ ವಿಕಾಸ ಪರಿಷದ್ ವತಿಯಿಂದ ಪರಿಸರ ದಿನಾಚರಣೆ

ಭಾರತ ವಿಕಾಸ ಪರಿಷದ್ ವತಿಯಿಂದ ಪರಿಸರ ದಿನಾಚರಣೆ

 ದಾವಣಗೆರೆ, ಜು.11- ನಗರದ ಭಾರತ ವಿಕಾಸ ಪರಿಷದ್, ಗೌತಮ ಶಾಖೆ ಹಾಗೂ ಓಶೋ ಧ್ಯಾನ ಶಾಲಾ ಸಂಯುಕ್ತಾಶ್ರಯದಲ್ಲಿ ಕೊಂಡಜ್ಜಿಯ ಓಶೋ ಧ್ಯಾನ ಶಾಲಾ ಆವರಣದಲ್ಲಿ ವಿವಿಧ ಬಗೆಯ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ನೆರಳಿನ ಸಸಿಗಳು, ಔಷಧೀಯ ಸಸಿಗಳು ಹಾಗೂ ಪ್ರಾಣಿ – ಪಕ್ಷಿಗಳಿಗೆ ಉಪಯುಕ್ತವಾಗುವ ಸುಮಾರು 62 ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

`ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’ ವಿಷಯವಾಗಿ ಚಿಂತನ – ಮಂಥನ ನಡೆಸಲಾಯಿತು. ಪರಿಸರ ವಿಕಾಸದ ಸಂಚಾಲಕ  ಡಾ. ವಿವೇಕ್ ಜಿ ಭಿಡೆ ಮಾತನಾಡಿ,  ಕಮ್ಮಿ ಸಮಯದಲ್ಲಿ ಅನ್ನ ಬೇಯಬೇಕೆಂದು ಪ್ರೆಷರ್ ಕುಕ್ಕರ್‌ನಲ್ಲಿ ಅನ್ನ ಮಾಡುತ್ತಿದ್ದೇವೆ. ಮಣ್ಣಿನ ಮಡಿಕೆಯಲ್ಲಿ ಆಹಾರ ತಯಾರಿ ಮಾಡುವುದನ್ನು ಬಿಟ್ಟಿದ್ದೇವೆ, ಇದರಿಂದ ಖನಿಜಾಂಶಗಳು ನಮ್ಮ ದೇಹಕ್ಕೆ ಸೇರುತ್ತಿಲ್ಲ, ಅನಿವಾರ್ಯತೆಯಿಂದ ಪ್ಲಾಸ್ಟಿಕ್ ಲೋಟಾ, ತಟ್ಟೆ, ಪ್ಲಾಸ್ಟಿಕ್ ಕವರ್‌ಗೆ ಮಾರು ಹೋಗಿದ್ದೇವೆ. ಇವುಗಳಿಂದ ಉತ್ಪತ್ತಿಯಾಗುವ ವಿಷ ಪದಾರ್ಥ ಬಳಸಿ ಆರೋಗ್ಯ ಹಾಗೂ ಪರಿಸರವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ.   ನಮ್ಮ ಮನೆಯಿಂದಲೇ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಂತಹ ಕೆಲಸವಾಗಬೇಕು ಎಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಬಿವಿಪಿಯ ದಕ್ಷಿಣ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಕೆ. ತಿಪ್ಪೇಸ್ವಾಮಿ ಮಾತನಾಡಿ, ಸಂಸ್ಕಾರದಿಂದ ಎಲ್ಲಾ ಸಾಧ್ಯ.  ಭಾರತ ವಿಕಾಸ ಪರಿಷದ್ ಈ ನಿಟ್ಟಿನಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಯಾವುದೇ ಆಚರಣೆಗಳು ಕೇವಲ ಸಾಂಕೇತಿಕ ಆಚರಣೆಯಾಗದೆ ಅದನ್ನು ಅಳವಡಿಸಿಕೊಂಡು ರೂಢಿಸಿಕೊಂಡಾಗ ಮಾತ್ರ ಉದ್ದೇಶ ಈಡೇರುತ್ತದೆ, ಆದುದರಿಂದ ಪರಿಸರ ಸಂರಕ್ಷಣೆಯಲ್ಲಿ ಭಾರತ ವಿಕಾಸ ಪರಿಷದ್ ನ ಸದಸ್ಯರು ಇನ್ನು ಮುಂದೆ ಪ್ಲಾಸ್ಟಿಕ್ ತಟ್ಟೆ, ಲೋಟ ಬಳಸಬಾರದು. 

ಅದರ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧ್ಯಕ್ಷತೆ ವಹಿಸಿದ್ದ  ಗೌತಮ ಶಾಖೆ ಅಧ್ಯಕ್ಷ ಡಾ. ಪ್ರಸಾದ್ ಬಂಗೇರ ಕರೆ ನೀಡಿದರು.

ಪರಿಸರ ಕಾರ್ಯಕ್ರಮದಲ್ಲಿ, ಓಶೋ ಧ್ಯಾನ ಶಾಲೆಯ ಶಿವಕುಮಾರ್,  ನಟರಾಜ್ ಗುಪ್ತ,  ಕರಿಬಸಪ್ಪ, ಪೃಥ್ವಿರಾಜ್ ಹಾಗೂ ಭಾರತ ವಿಕಾಸ ಪರಿಷದ್ ನ ಶೀಲಾ ನಾಯಕ್, ಬಸವರಾಜ್ ಒಡೆಯರ್, ಮಧುಕರ್, ಹಿರೇಮಠ್ ಮತ್ತಿತರರು  ಉಪಸ್ಥಿತರಿದ್ದರು.

ಶ್ರೀಮತಿ ಭವಾನಿ ಶಂಭುಲಿಂಗಪ್ಪ ಮತ್ತು ಶೀಲಾ ನಾಯಕ್ ವಂದೇ ಮಾತರಂ ಹಾಡಿದರು, ಪೃಥ್ವಿರಾಜ್ ವಂದಿಸಿದರು ಮತ್ತು ಪರಿಸರ ವಿಕಾಸದ ಸಹ ಸಂಚಾಲಕ ಸಿದ್ದೇಶ್ ಎಸ್. ಆರ್. ಕಾರ್ಯಕ್ರಮ ನಿರೂಪಿಸಿದರು.

error: Content is protected !!