ದಾವಣಗೆರೆ, ಜು.11- ವಿಜ್ಞಾನ್ ಅಕಾಡೆಮಿ ವತಿಯಿಂದ ಈಚೆಗೆ ನಗರದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ, ಮಾನವ ಕಂಪ್ಯೂಟರ್, ಖ್ಯಾತಿಯ ಬಸವರಾಜ ಶಂಕರ ಉಮರಾಣಿ ಮಾತನಾಡಿ, ವಿಜ್ಞಾನ್ ಆಕಾಡೆಮಿಯು ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಫಲಿತಾಂಶ ಹಾಗೂ ಶ್ರೇಷ್ಠ ಸಾಧನೆಯನ್ನು ಮಾಡುತ್ತಾ, ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಪಿಯು ಹಾಗೂ ನೀಟ್ ಮೆಡಿಕಲ್ ವಿದ್ಯಾರ್ಥಿಗಳಿಗೆ ವಿಜ್ಞಾನ ಅಕಾಡೆಮಿ ಸಂಜೀವಿನಿಯಾಗಿದೆ ಎಂದು ಪ್ರಶಂಸೆ ವ್ಯಕ್ತಡಿಸಿದರು.
ವಿದ್ಯಾರ್ಥಿ ಜೀವನ ಬಂಗಾರದಂತೆ. ಹಾಗಾಗಿ ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ಸುಂದರ ಭವಿಷ್ಯ ನಿರ್ಮಿಸಿಕೊಳ್ಳಬೇಕು. ಸಮಯ ಪ್ರಜ್ಞೆಯನ್ನು ಬೆಳೆಸಿ ಕೊಂಡು ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ಏಕೆಂದರೆ ಸಮಯ ಎಲ್ಲದಕ್ಕಿಂತಲೂ ಅಮೂಲ್ಯವಾ ದುದು, ಸಮಯವನ್ನು ನೀವು ಗೌರವಿಸಿದರೆ, ಅದು ನಿಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಳ್ಳಿ. ಶಿಕ್ಷಣಕ್ಕೆ ಆದ್ಯತೆ ನೀಡಿ, ಮೊಬೈಲ್ನಿಂದ ದೂರವಿದ್ದು, ಪುಸ್ತಕ ಪ್ರೇಮಿಗಳಾಗಿ, ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ. ಅದನ್ನು ಉಜ್ವಲವಾಗಿ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಸಂಜಯ್ ಗೌಡ, ಮುಖ್ಯಸ್ಥ ಜಿ.ಎಸ್. ಸತೀಶ್, ಭುವನೇಶ್ವರ್, ಎಂ. ಸಂತೋಷ್ಕುಮಾರ್ ಹಾಗೂ ಪ್ರಾಂಶುಪಾಲರಾದ ಪಿ. ಚಂದ್ರಶೇಖರ್ ಉಪಸ್ಥಿತರಿದ್ದರು.