ಹೊನ್ನಾಳಿ, ಜು.10- ತಾಲ್ಲೂಕಿನ ಸಾಸ್ವೇಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಪೀಠದ ಲಿಂಗೈಕ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಮೂರನೇ ವರ್ಷದ ಪುಣ್ಯಾರಾಧನೆ ಗ್ರಾಮದ ಕಲ್ಮಠದ ಜೀವೈಕ್ಯ ಕರ್ತೃಗದ್ದುಗೆಯ ಆವರಣದಲ್ಲಿ ನಿನ್ನೆ ನಡೆಯಿತು.
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಪೀಠದ ಲಿಂ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಮೂರನೇ ವರ್ಷದ ಪುಣ್ಯಾರಾಧನೆಯ ಅಂಗವಾಗಿ ಬೆಳಿಗ್ಗೆ ಗಂಗಾ ಪೂಜೆ, ಶ್ರೀ ಗಣಪತಿ, ಪುಣ್ಯಾಹ, ಗುರುಕಲಶದ ಪೂಜಾ, ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರ ಹಾಗೂ ಲಿಂಗೈಕ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಕರ್ತೃಗದ್ದುಗೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ದಾರ್ಮಿಕ ಪೂಜಾ ಕೈಂಕರ್ಯಗಳ ವಿಶೇಷ ಪೂಜಾ ಅಲಂಕಾರ ಮತ್ತು ವಿಶೇಷ ಧಾರ್ಮಿಕ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅಲಂಕೃತ ಟ್ರ್ಯಾಕ್ಟರ್ನಲ್ಲಿ ಲಿಂಗೈಕ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಂಡೆ ವಾದ್ಯದ ಮೇಳದೊಂದಿಗೆ ಮೆರವಣಿಗೆ ನಡೆಯಿತು.