ಮಕ್ಕಳ ಶಿಕ್ಷಣದಲ್ಲಿ ರಾಜಕೀಯ : ಶಿಕ್ಷಣ ಕ್ಷೇತ್ರವೇ ಅತಂತ್ರ
ದಾವಣಗೆರೆ,ಜು.10- ಈ ಹಿಂದೆ 2 ವರ್ಷಗಳಿಂದ ಎನ್‍ಇಪಿ ರಾಜ್ಯದಲ್ಲಿ ಜಾರಿಯಾಗಿದೆ. ಪದವಿ ಕಾಲೇಜಿನಲ್ಲಿ 3 ವರ್ಷದ ಕೋರ್ಸ್‍ಗಳು 4 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ 2 ವರ್ಷ ವಿದ್ಯಾರ್ಥಿಗಳು ಆ ಪಠ್ಯಕ್ರಮವನ್ನು ಅನುಸರಿಸಿ ಈಗಾಗಲೇ ವ್ಯಾಸಂಗ ಮಾಡುತ್ತಿದ್ದಾರೆ.
ಈಗ ರಾಜ್ಯ ಸರ್ಕಾರ ಬದಲಾದ ತಕ್ಷಣ ಎನ್‍ಇಪಿ ರದ್ದು, ರಾಜ್ಯ ಪಠ್ಯಕ್ರಮ ಜಾರಿ ಎಂದರೆ ಹೇಗೆ? ಈ ವಿದ್ಯಾರ್ಥಿಗಳ ಮುಂದಿನ ವ್ಯವಸ್ಥೆ ಏನು? ಈಗಾಗಲೇ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಕರ್ನಾಟಕ ಪರೀಕ್ಷಾ ಮೌಲ್ಯ ಮಾಪನ ಮಂಡಳಿಯಾಗಿದೆ.
ಹೀಗೆ ಎನ್‍ಇಪಿ ಅಡಿಯಲ್ಲಿ ರಾಜ್ಯಾದ್ಯಂತ ಶಿಕ್ಷಣ ವ್ಯವಸ್ಥೆಯ ಹೊಸ ನಿಲುವನ್ನು ಕೊಟ್ಟಿದೆ. ಶಿಕ್ಷಣ ಇಲಾಖೆ ಇಲಾಖಾ ಹಂತದಲ್ಲಿಯೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು, ಹತ್ತು -ಹಲವಾರು ಕಾರ್ಯಕ್ರಮ ಮಾಡಿ ಕೋಟ್ಯಾಂತರ ರೂ. ಹಣವನ್ನು ವಿನಿಯೋಗ ಮಾಡಿದೆ.
ಎನ್‍ಇಪಿ ಜಾರಿಯಿಂದ ರಾಜ್ಯ ಸರ್ಕಾರಕ್ಕೆ ಆಗುವ ನಷ್ಟವೇನು? ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೆ ರಾಜಕೀಯ ಪಕ್ಷಗಳು, ಮಕ್ಕಳ ಶಿಕ್ಷಣದ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.
ಆದ್ದರಿಂದ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಈ ಬಗ್ಗೆ ಗಮನ ಹರಿಸಿ, ಎನ್‍ಇಪಿ ಮರುಜಾರಿ ಮಾಡಲು ಕ್ರಮ ವಹಿಸಿ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ
ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಚ್.ಜಿ., ಗೌರವ ಅಧ್ಯಕ್ಷ ಕಂದನಕೋವಿ ಪ್ರಕಾಶ್, ದಿನೇಶ್, ವೀರೇಶ್ ಬಿರಾದಾರ್, ಮಂಜುನಾಥ ಸ್ವಾಮಿ, ನಾಗರಾಜ್ ಎಸ್.ಎಂ.ಎಸ್. ಮುಂತಾದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.