ದಾವಣಗೆರೆ, ಜು. 10- ಪಂಚ ಗ್ಯಾರಂಟಿ ಜಾರಿ ಮಾಡುವ ತರಾತುರಿಯಲ್ಲಿ ಶಿಕ್ಷಕರಿಗೆ, ಶಿಕ್ಷಣ ಇಲಾಖೆ ನೌಕರರಿಗೆ ಮಕ್ಮಲ್ ಟೋಪಿ ಹಾಕದೆ, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಹಾಗೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ನೂತನ ಪಿಂಚಣಿ ಯೋಜನೆ ವಾಪಸ್ ಪಡೆದು, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಅತಿಥಿ ಉಪನ್ಯಾಸಕರ ಸಂಘದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನೂತನ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರನ್ನು 10 ತಿಂಗಳ ಅವಧಿಗೆ ತೆಗೆದುಕೊಂಡಿರುವುದರಿಂದ ಹಲವು ಗೊಂದಲ, ಗೊಜಲುಗಳಿವೆ. ಆದ್ದರಿಂದ ಗೊಂದಲ ಬಗೆಹರಿಸಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಉಪನ್ಯಾಸಕರ ವರ್ಗಾವಣೆ ನಿಯಂತ್ರಣ ಕಾಯ್ದೆಯ ಮಾನದಂಡಗಳನ್ನು ಪರಿಶೀಲಿಸಿ, ಅವುಗಳನ್ನು ಸರಳೀಕರಣಗೊಳಿಸಿ ಡಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಎ ವಲಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ತಕ್ಷಣವೇ 7ನೇ ವೇತನ ಆಯೋಗದ ವರದಿ ಪಡೆದು ವೇತನ ಪರಿಷ್ಕರಿಸಬೇಕು. ರಾಜ್ಯದ ಪದವಿ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಸರ್ಕಾರ ತಕ್ಷಣವೇ ತುಂಬಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಅತಿಥಿ ಉಪನ್ಯಾಸಕರ ಸಂಘದ ಕೊಟ್ರೇಶ್, ವಿಜಯಕುಮಾರ್ ಮತ್ತಿತರರಿದ್ದರು.