ಯುಯುಸಿಎಂಎಸ್ ಪೋರ್ಟಲ್ ಅನುಷ್ಠಾನ ಕಡ್ಡಾಯ ಸರ್ವಾಧಿಕಾರಿ ಧೋರಣೆ

ದಾವಣಗೆರೆ, ಜು. 9-   ಯುಯುಸಿಎಂಎಸ್ ಪೋರ್ಟಲ್   ಅನುಷ್ಠಾನ ಕಡ್ಡಾಯಗೊಳಿಸುವ ಉನ್ನತ ಶಿಕ್ಷಣ ಇಲಾಖೆಯ ಆದೇಶ ಅತ್ಯಂತ ಅಪ್ರಜಾ ತಾಂತ್ರಿಕ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ ಎಂದು   ಎಐಡಿಎಸ್ಒ   ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್  ಖಂಡಿಸಿದ್ದಾರೆ.

ಈ ಸಂಬಂಧ  ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಈ ಪೋರ್ಟಲ್ ಬಂದಾಗಿನಿಂದಲೂ ಅದು ಹಲವಾರು ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಉನ್ನತ ಶಿಕ್ಷಣ ಇಲಾಖೆಯೇ ನೇರ ಹೊಣೆ. ಮೊದಲಿನಿಂದಲೂ ಇದು ದೋಷಪೂರಿತವಾಗಿಯೇ ಇತ್ತು ಮತ್ತು ಆ ಕಾರಣದಿಂದ ಪರೀಕ್ಷೆಗಳು ಮತ್ತು ಫಲಿತಾಂಶಗಳು ವಿಳಂಬವಾಗುತ್ತಿದ್ದವು ಮತ್ತು ಶೈಕ್ಷಣಿಕ ವರ್ಷವೇ 6 ತಿಂಗಳಷ್ಟು ಕಾಲ ವಿಳಂಬವಾಗಿತ್ತು.

ಈಗ ಏಕಾಏಕಿ ಎಲ್ಲಾ ಕಾಲೇಜುಗಳು ಈ ಪೋರ್ಟಲ್ ಅಳವಡಿಸಲೇಬೇಕು, ಹಾಗೆ ಮಾಡದ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ನೀಡಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. 

ಪೋರ್ಟಲ್ ಅನ್ನು ಒದಗಿಸಬೇಕಾದರೆ, ಅದರ ಅನುಷ್ಠಾನ ಹೇಗೆ, ಸವಾಲುಗಳು ಏನು ಮತ್ತು ತೊಂದರೆಗಳು ಏನು ಇವೆಲ್ಲವನ್ನೂ
ಕೂಲಂಕುಶವಾಗಿ ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಮಾಡಬೇಕಿತ್ತು, ಆದರೆ ವಾಸ್ತವದಲ್ಲಿ ಅದು ಸಾಕಷ್ಟು ಬಿಕ್ಕಟ್ಟುಗಳನ್ನು ತಂದಿತೇ ವಿನಃ ಪೋರ್ಟಲ್ ನ ಕೆಲಸ ಸರಾಗವಾಗಿ ನಡೆದಿರಲಿಲ್ಲ ಎಂಬ ಸತ್ಯಾಂಶ ಎಲ್ಲರಿಗೂ ತಿಳಿದಿದೆ.    ಹಾಗಾಗಿ, ಈ ಪೋರ್ಟಲ್ ಅನ್ನು ಕಡ್ಡಾಯ ಅನುಷ್ಠಾನ ಮಾಡಬೇಕು ಎನ್ನುವ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು  ಎಐಡಿಎಸ್‌ಒ  ಆಗ್ರಹಿಸುತ್ತದೆ ಎಂದು  ಜಿಲ್ಲಾ ಕಾರ್ಯದರ್ಶಿ  ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.

error: Content is protected !!