ಸಾಲುಮರದ ವೀರಾಚಾರಿ ಹೆಸರಿನಲ್ಲಿ ಅಧ್ಯಯನ ಕೇಂದ್ರ ತೆರೆಯಲು ಸಚಿವರಿಗೆ ಮನವಿ

ಸಾಲುಮರದ ವೀರಾಚಾರಿ ಹೆಸರಿನಲ್ಲಿ ಅಧ್ಯಯನ ಕೇಂದ್ರ ತೆರೆಯಲು ಸಚಿವರಿಗೆ ಮನವಿ

ದಾವಣಗೆರೆ, ಜು.9- ಪರಿಸರ ಸಂರಕ್ಷಣೆ ವೇದಿಕೆ ದಾವಣಗೆರೆ ಘಟಕದ ವತಿಯಿಂದ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿಯವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ತೆರೆಯಲು ಅರಣ್ಯಜೀವಿ ಪರಿಸ್ಥಿತಿ ಹಾಗೂ ಪರಿಸರ ಕಲ್ಯಾಣ ಇಲಾಖೆ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಮಾಡಿದ್ದಾರೆ.

ಹರಿಹರ ತಾಲ್ಲೂಕಿನ ಮಿಟ್ಲಕಟ್ಟಿ ಗ್ರಾಮದ ಸಾಲುಮರದದ ವೀರಾಚಾರಿಯವರು ಸುಮಾರು 7 ಕಿ.ಮೀ. ದೂರದವರೆಗೆ ರಸ್ತೆ ಬದಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಹೆಮ್ಮರವನ್ನಾಗಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಇದರ ಜೊತೆಗೆ ರಾಜ್ಯದ ತುಂಬೆಲ್ಲಾ ಸಂಚರಿಸಿ ಹಲವಾರು ಕಡೆ ಸಾವಿರಾರು ಗಿಡಗಳನ್ನು ನೆಟ್ಟು ಜಾಗೃತಿ ಮೂಡಿಸಿದ್ದಾರೆ. ಇದನ್ನು ಗಮನಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿದೆ. 

ಇತ್ತೀಚೆಗೆ ಇವರು ಬಡ ಜನರಿಗೆ ನ್ಯಾಯಬೆಲೆ ಅಂಗಡಿ ಯಲ್ಲಿ ನ್ಯಾಯವಾದ ರೀತಿಯಲ್ಲಿ ಪಡಿತರ ಅಕ್ಕಿ ದೊರೆತಿಲ್ಲವೆಂದು ಕಾನೂನಿನ ಮುಖಾಂತರ ಹೋರಾಟ ನಡೆಸಿ, ನ್ಯಾಯ ಸಿಗದಿದ್ದರೆ ನೇಣಿಗೆ ಶರಣು ಎಂದು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಇದನ್ನು ಗಮನಿಸಿ, ಜಿಲ್ಲೆಯಲ್ಲಿ 10 ಎಕರೆಗಿಂತ ಹೆಚ್ಚಿನ ಸ್ಥಳದಲ್ಲಿ ದಿವಂಗತ ಸಾಲುಮರದ ವೀರಾಚಾರಿಯವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಮಾಡಿ, ಅದರಲ್ಲಿ ಪರಿಸರ, ಪ್ರಾಣಿ, ಪಕ್ಷಿ ಜೀವ ವ್ಯವಸ್ಥೆ ಬಗ್ಗೆ ಮಕ್ಕಳಿಗೆ ವಿಶೇಷ ಶಿಕ್ಷಣ ಸಿಗುವಂತೆ ಮಾಡುವುದಕ್ಕಾಗಿ ಅಧ್ಯಯನ ಕೇಂದ್ರ ಆರಂಭಿಸುವಂತೆ ಈ ಮೂಲಕ ಈಶ್ವರ ಖಂಡ್ರೆಯವರಿಗೆ ಮನವಿ ಮಾಡಿದ್ದಾರೆ.

error: Content is protected !!