ಜೈನಮುನಿ ಹತ್ಯೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಖಂಡನೆ

ಜೈನಮುನಿ ಹತ್ಯೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಖಂಡನೆ

ದಾವಣಗೆರೆ, ಜು.9- ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಶ್ರೀಮದ್‌ ಅಭಿನವ ರೇಣುಕ ಮಂದಿರದಲ್ಲಿ ಇಂದು ಪತ್ರಿಕಾ ಹೇಳಿಕೆ ನೀಡಿರುವ ಜಗದ್ಗುರುಗಳು, ಅಹಿಂಸಾ ಮಾರ್ಗದಲ್ಲಿ ಸಾಗುತ್ತಿದ್ದ ಮತ್ತು ತಮ್ಮ ಕೈಯ್ಯಿಂದ ಬಡ ಜನರಿಗೆ ಉಪಕಾರ ಮಾಡುತ್ತಿದ್ದ ಜೈನಮುನಿ ಕಾಮಕುಮಾರ ನಂದಿ ಮುನಿಗಳ ಅಮಾನುಷ ಹತ್ಯೆ ಇಡೀ ನಾಗರಿಕ ಪ್ರಪಂಚ ತಲೆ ತಗ್ಗಿಸುವಂತಹ ಘಟನೆಯಾಗಿದೆ ಎಂದಿದ್ದಾರೆ. 

ಮಾನವೀಯತೆ ಇಲ್ಲದ ದುಷ್ಟಶಕ್ತಿಗಳು ಈ ಕೃತ್ಯ ಎಸೆಗಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಸರ್ಕಾರ ವಿಧಿಸುವಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಬಯಸಿದ ಜಗದ್ಗುರುಗಳು, ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುವವರಿಗೆ ಸರ್ಕಾರ ರಕ್ಷಣೆ ಕೊಡಬೇಕೆಂದು ಒತ್ತಾಯಪಡಿಸಿದ್ದಾರೆ. ಅಲ್ಲದೇ ಇಂತಹ ಘಟನೆ ಮುಂದೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದರು. 

ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಲದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಲ್ಲಿ ಸಂಘರ್ಷ ಉಂಟಾಗಿ 12 ಜನರು ಸಾವಿಗೀಡಾಗಿದ್ದು ನೋವಿನ ಸಂಗತಿ. ರಾಜಕೀಯ ಅಧಿಕಾರ ಪಡೆಯಲು ವ್ಯಾಪಕವಾದ ಸಂಘರ್ಷಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿರುವುದು ಒಳ್ಳೆಯದಲ್ಲ. ರಾಜಕೀಯ ಧುರೀಣರು ಉದ್ರೇಕ ಭಾವನೆಗಳಿಂದ ಆಗುವ ಅನಾಹುತಕ್ಕೆ ಅವಕಾಶ ಕೊಡದೇ ಜನ ಸಮುದಾಯ ಪರಸ್ಪರ ಶಾಂತಿ, ಸಾಮರಸ್ಯದಿಂದ ಬಾಳಲು ಶ್ರಮಿಸಬೇಕೆಂದು ತಿಳಿಸಿದ್ದಾರೆ.

error: Content is protected !!