ಕಥಾ ಶೈಲಿ, ವಿನ್ಯಾಸದಲ್ಲಿ ಯಾವುದೂ ಅಂತಿಮವಲ್ಲ

ಕಥಾ ಶೈಲಿ, ವಿನ್ಯಾಸದಲ್ಲಿ ಯಾವುದೂ ಅಂತಿಮವಲ್ಲ

ದೇಸಿ ಜಗಲಿ ಕಥಾ ಕಮ್ಮಟದಲ್ಲಿ ಡಾ. ಸತ್ಯನಾರಾಯಣ

ದಾವಣಗೆರೆ, ಜು.9- ವಸ್ತು, ಪಾತ್ರ, ಭಾಷೆ, ನಿರೂಪಣೆಯ ಒಟ್ಟು ಮೊತ್ತವೇ ಒಂದು ಉತ್ತಮ ಕಥೆ ಎಂದು ಡಾ. ಎಚ್.ಎಸ್. ಸತ್ಯನಾರಾಯಣ ಅಭಿಪ್ರಾಯ ಪಟ್ಟರು.

ವೀರಲೋಕ ಬುಕ್ಸ್ ಮತ್ತು ಸಿದ್ಧಗಂಗಾ ಶಾಲೆಯ ಸಹಯೋಗದಲ್ಲಿ ನಗರದಲ್ಲಿ ನಡೆಯುತ್ತಿರುವ ದೇಸಿ ಜಗಲಿ ಕಥಾ ಕಮ್ಮಟದಲ್ಲಿ ಕಥೆಯ ವಸ್ತು ಮತ್ತು ವಿನ್ಯಾಸ ಕುರಿತು ಮಾತನಾಡಿದರು. 

ಮಾಸ್ತಿ, ತೇಜಸ್ವಿ, ಲಂಕೇಶ್, ಅನಂತ ಮೂರ್ತಿ, ಶಾಂತಿನಾಥ ದೇಸಾಯಿ ಮುಂತಾದ ಕನ್ನಡದ ಶ್ರೇಷ್ಠ ಕಥೆಗಾರರದು ಒಂದೊಂದು ಶೈಲಿ, ವಿನ್ಯಾಸವಿತ್ತು. ಯಾವುದೂ ಅಂತಿಮ ವಲ್ಲ. ಹೊಸ ತಲೆಮಾರಿನ ಕಥೆಗಾರರಲ್ಲಿ ಹಲವು ಪ್ರಯೋಗಶೀಲತೆಗಳು ನಡೆದಿವೆ.  

ಸಂಕೀರ್ಣವಾದ ವಸ್ತುವನ್ನು ಸರಳಗೊಳಿಸಬಾರದು ಸರಳವಾದ ವಸ್ತುವನ್ನು ಸಂಕೀರ್ಣಗೊಳಿಸಬಾರದು ಎಂಬುದು ಲಂಕೇಶರ ಅಭಿಪ್ರಾಯವಾಗಿತ್ತು. ತೇಜಸ್ವಿಯವರು ತಮ್ಮ ಸುತ್ತಲಿನ ಸಣ್ಣ ಸಣ್ಣ ಸಂಗತಿಗಳನ್ನು ಕಥೆಯನ್ನಾಗಿಸಿ, ಓದುಗರಲ್ಲಿ ಕುತೂಹಲ, ಆಸಕ್ತಿ ಮೂಡಿಸುವಂತೆ ಬರೆಯುತ್ತಿದ್ದರು. ಅವರ `ಕೃಷ್ಣೇಗೌಡನ ಆನೆ’ ಭಾರತೀಯ ಸಾಹಿತ್ಯದ ಹತ್ತು ವರ್ಷಗಳ ಅವಧಿಯಲ್ಲಿ ಬಂದಂತಹ ಶ್ರೇಷ್ಠ ಕಥೆಯಾಗಿತ್ತು ಎಂದರು. 

ಬರಹಗಾರನಿಗೆ ಪರಂಪರೆಯನ್ನು ಅನುಸರಿಸಲು ಸವಾಲುಗಳಿರುವಂತೆ ಅಘೋಷಿತ ಜವಾಬ್ದಾರಿಗಳೂ ಇರುತ್ತವೆ.  ದೇವರಾಜ ಅರಸು ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೊಳಿಸಲು ಕಾರಂತರ `ಚೋಮನ ದುಡಿ’ ಕಾದಂಬರಿ ಪ್ರೇರಣೆಯಾಗಿತ್ತು ಎಂದು ಸತ್ಯನಾರಾಯಣ ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ – ಸಾಹಿತಿ ಬಿ.ಎನ್.ಮಲ್ಲೇಶ್‌ ಮಾತನಾಡಿ, ಕಥಾ ಪರಂಪರೆಗೆ ಬಹಳ ದೊಡ್ಡ ಇತಿಹಾಸವಿದೆ. ಮಾಸ್ತಿ, ಗೊರೂರು, ಲಂಕೇಶ್ ಇನ್ನೂ ಅನೇಕ ಹಿರಿಯ ಕಥೆಗಾರರು ಕಥಾ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ನಮ್ಮ ಕಾಲದಲ್ಲಿ ಕಥಾ ಸ್ವರೂಪಕ್ಕೆ ಪ್ರಭಾವಿತರಾಗಿ ನಾನು ಕೂಡ ಕಥೆಗಳನ್ನು ಬರೆದಿದ್ದುಂಟು. ದಾವಣಗೆರೆ ವಲಯದಲ್ಲಿ ಈ ಅಪರೂಪದ ಕಥಾ ಕಮ್ಮಟವನ್ನು ವೀರಲೋಕ ಮತ್ತು ಇಂದ್ರಕುಮಾರ್, ಫೈಜ್ನಟ್ರಾಜ್ ಹಾಗು ಪಾಪುಗುರು ಈ ಮೂವರು ಸೇರಿ ಆಯೋಜಿಸಿ ಮಹತ್ವದ ಕೆಲಸ ಮಾಡಿದ್ದಾರೆ. ಈ ಕಮ್ಮಟಗಳು ಅಕ್ಷರಗಳನ್ನು ಮುರಿದು ಕಟ್ಟುವುದು ಇಲ್ಲ, ಕಟ್ಟಿ ಮುರಿಯುವುದು ಹೇಗೆ ಎಂಬುದನ್ನು ಹೇಳಿಕೊಡುತ್ತವೆ ಎಂದರು.

ಹಿರಿಯ ಕಥೆಗಾರ ಬಾ.ಮ. ಬಸವರಾಜಯ್ಯ  ಸಮಾರೋಪ ನುಡಿಗಳನ್ನಾಡುತ್ತಾ, ಕಥೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬದ ಕೊಂಡಿಗಳು, ಅವು ಎಂದಿಗೂ ನಮ್ಮನ್ನು ಅಂಟಿಕೊಂಡೇ ಇರುತ್ತವೆ. ಆದರೆ ನಾವು ಕಥೆಗಾರರಾಗಿ ಅದರ ಒಳಹುಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಥೆ ಬರೆಯಬೇಕೆಂದರು.

ಕಥೆಗಾರರಾದ ಸದಾಶಿವ ಸೊರಟೂರು, ಇಂದ್ರಕುಮಾರ್, ಫೈಜ್ ನಟರಾಜ್ ಭಾಗವಹಿಸಿದ್ದರು. ಕಮ್ಮಟದಲ್ಲಿ ನಾನು ಮೆಚ್ಚಿದ ಕಥೆ ಕುರಿತು ಶಿಬಿರಾರ್ಥಿಗಳೊಂದಿಗೆ ಚರ್ಚೆ, ಸಂವಾದಗಳು ನಡೆದವು. ಪಾಪುಗುರು ಮತ್ತು ನಾಗರಾಜ ಸಿರಿಗೆರೆ ಕಮ್ಮಟವನ್ನು ನಿರ್ವಹಿಸಿದರು.

error: Content is protected !!