ಸರ್ಕಾರಿ ಶಾಲೆಗಳಿಗೇ ಮಕ್ಕಳನ್ನು ಸೇರಿಸಿ

ಸರ್ಕಾರಿ ಶಾಲೆಗಳಿಗೇ ಮಕ್ಕಳನ್ನು ಸೇರಿಸಿ

ಹೊನ್ನಾಳಿ ತಾಲೂಕು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯ ಸಮಿತಿ ಉಪಾಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ ಮನವಿ

ಹೊನ್ನಾಳಿ, ಜು.9- ಹೊನ್ನಾಳಿ ತಾಲೂಕು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮನ್ವಯ ಸಮಿತಿ ಉಪಾಧ್ಯಕ್ಷರನ್ನಾಗಿ  ಕೋರಿ ಯೋಗೀಶ್ ಕುಳಗಟ್ಟೆ ಅವರನ್ನು ನೇಮಕ ಮಾಡಲಾಗಿದೆ ಎಂದು ಎಸ್.ಡಿ.ಎಂ.ಸಿ. ತಾಲ್ಲೂಕು ಅಧ್ಯಕ್ಷ ಎ.ಎಸ್. ಶಿವಲಿಂಗಪ್ಪ ತಿಳಿಸಿದರು.

ತಾಲ್ಲೂಕಿನ ಸಾಸ್ವೆಹಳ್ಳಿ ಕೆ.ಪಿ.ಎಸ್. ಶಾಲೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 

ನೂತನವಾಗಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾಗಿ ಆಯ್ಕೆಯಾದ ಕೋರಿ ಯೋಗೀಶ್ ಕುಳಗಟ್ಟೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಪ್ರತಿಭಾವಂತರಾಗಿದ್ದು, ಖಾಸಗಿ ಶಾಲಾ ಶಿಕ್ಷಕರನ್ನು ಮೀರಿಸುವಂತಹ ಎಲ್ಲಾ ರೀತಿಯ ಅರ್ಹತೆ ಮತ್ತು ಪ್ರತಿಭೆಯು ಇರುತ್ತದೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಸರಿಯಾದ ಕಾರಣ ಕಂಡು ಹಿಡಿದು ಪರಿಹಾರವಾಗಿ ಉತ್ತಮ ಶಿಕ್ಷಣ, ಕಲಿಕಾ ವಾತಾವರಣವನ್ನು ಸರ್ಕಾರಿ ಶಾಲಾ ಶಿಕ್ಷಕರು ಒದಗಿಸಿಕೊಟ್ಟಿದ್ದೇ ಆದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕೊರತೆ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳಿದ್ದು, ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಎಸ್.ಡಿ.ಎಂ.ಸಿ. ಸಂಘಟನಾ ಕಾರ್ಯದರ್ಶಿ ಎಲ್. ರುದ್ರನಾಯ್ಕ  ಮಾತನಾಡಿ, ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕು. ಖಾಸಗಿ ಶಾಲೆಗಳ ಪೈಪೋಟಿಯಿಂದ ಆಯಾ ಗ್ರಾಮದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರುವಂತೆ ಮಾಡಬೇಕು. ಶಾಲೆಗಳಲ್ಲಿ ಸಿಗುವ ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿ ಊಟ, ಶೂ ಭಾಗ್ಯ, ಸ್ಕಾಲರ್ ಶಿಪ್ ಬಗ್ಗೆ ಜನರಲ್ಲಿ ಜಾಗೃತಿ ಎಸ್.ಡಿ.ಎಂ.ಸಿ. ಸದಸ್ಯರು ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸದಸ್ಯರಾದ ರಂಜಿತ ಉಜ್ಜಿನಮಠ, ಶಿವಮೂರ್ತಿ, ಮಲ್ಲಿಕಾರ್ಜುನ್, ಶಿಕ್ಷಕರಾದ ಈಶ್ವರಪ್ಪ, ಪದ್ಮಶ್ರೀ, ಅನುಷ ಮತ್ತಿತರರು ಉಪಸ್ಥಿತರಿದ್ದರು.

error: Content is protected !!