ದಾವಣಗೆರೆ, ಜು.6- ಮಕ್ಕಳಲ್ಲಿ ನಾಯಕತ್ವ ಬೆಳೆಸುವ ಜೊತೆಯಲ್ಲಿ ಅವರಿಗೆ ಜವಾಬ್ದಾರಿಗಳನ್ನು ವಹಿಸಿ, ನಾಯಕತ್ವ ಗುಣಗಳನ್ನು ಬೆಳೆಸಲು ಶಾಲೆಯ ಸಂಸತ್ (ಪಾರ್ಲಿಮೆಂಟ್) ರಚಿಸಲಾಗಿದೆ ಎಂದು ಸೆಂಟ್ ಪಾಲ್ಸ್ ಕಾನ್ವೆಂಟ್ ಸಿಬಿಎಸ್ಇ ವಿಭಾಗದ ಪ್ರಾಚಾರ್ಯರಾದ ಸಿಸ್ಟರ್ ಸಮಂತ ಹೇಳಿದರು.
ನಗರದ ಸೆಂಟ್ ಪಾಲ್ಸ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ (ಪಾರ್ಲಿಮೆಂಟ್) ರಚನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದಗ್ರಹಣ ಮಾಡಿ ಅವರು ಮಾತನಾಡಿದರು.
ಇಲ್ಲಿ ಮಕ್ಕಳಿಗೆ ಸಂಸತ್ನಲ್ಲಿರುವಂತೆ ಸಚಿವ ಸ್ಥಾನ ನೀಡಲಾಗುವುದು. ಶಾಲಾ ಅಧ್ಯಕ್ಷರು, ಉಪಾಧ್ಯಕ್ಷರು, ಆರೋಗ್ಯ, ಶಿಕ್ಷಣ, ಸ್ವಚ್ಛತೆ,
ಶಿಸ್ತು, ಪರಿಸರ, ಕ್ರೀಡಾ, ಸಾಂಸ್ಕೃತಿಕ ಸೇರಿದಂತೆ, ವಿವಿಧ ವಿಭಾಗಗಳ ಸಚಿವರುಗಳನ್ನು ಆಯ್ಕೆ ಮಾಡಿ ಅವರುಗಳಿಗೆ ಜವಾಬ್ದಾರಿಗಳನ್ನು ನೀಡಲಾಗುವುದು ಎಂದರು.
ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಸಿಸ್ಟರ್ ಮಾರ್ಜರಿ ಮಾತನಾಡಿ, ಮಕ್ಕಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದ್ದು, ಮಕ್ಕಳು ಸಮಾಜ ಸೇವೆಯ ಗುಣಗಳನ್ನು ಬೆಳೆಸಿಕೊಳ್ಳಲು ಈ ಸಂಸತ್ (ಪಾರ್ಲಿಮೆಂಟ್) ರಚನೆ ಮಾಡ ಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿ ಪದಗ್ರಹಣ ಮಾಡಲಾಯಿತು.
ಸಿಸ್ಟರ್ ಲಿಂಡಾ, ಸಿಸ್ಟರ್ ರೋಸಿಂತಾ, ಪ್ರೌಢಶಾಲೆ ಶಿಕ್ಷಕರಾದ ಭಾಗ್ಯನಾಥನ್, ಕ್ಲಮೆನ್ಸಿಯಾ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.