ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕು

ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕು

ಹರಿಹರ, ಜು. 6 – ಕಳೆದ 8-10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕಾಗಿವೆ. ಮಳೆ ಬಾರದೇ ಮಂಕಾಗಿದ್ದ ರೈತರ ದುಗುಡ ಸ್ವಲ್ಪ ಕಡಿಮೆಯಾಗಿದೆ.

ಜೂನ್ ತಿಂಗಳಿಡೀ ಮಳೆ ಕುಂಠಿತವಾಗಿತ್ತು. ಮಳೆಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ಕತ್ತೆ ಮೆರವಣಿಗೆ ಸೇರಿದಂತೆ ಹಲವಾರು ಪದ್ಧತಿಗಳನ್ನು ನೆರವೇರಿಸಲಾಗಿತ್ತು. ಆದರೂ, ವರುಣನ ಕೃಪೆಯಾಗದೇ ರೈತರು ಪ್ರತಿನಿತ್ಯ ಮುಗಿಲು ನೋಡುವ ಪರಿಸ್ಥಿತಿ ಇತ್ತು.

ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದ ರೈತರು, ಮಳೆ ಬಾರದ ಕಾರಣ ಚಿಂತೆಗೀಡಾಗಿದ್ದ ರು. ಈಗ ಸುರಿಯುತ್ತಿರುವ ಹಸಿ ಮಳೆಯಿಂದಾಗಿ ಬಿತ್ತನೆ ಕಾರ್ಯಗಳನ್ನು ಆರಂಭಿಸಿದ್ದಾರೆ.

ಮಳೆ ಬಾರದೇ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಭುಗಿಲೇಳುವ ಕಳವಳವೂ ಇತ್ತು. ಈಗ ಜನತೆ ಹಾಗೂ ಅಧಿಕಾರಿ ವರ್ಗದಲ್ಲಿನ ಆತಂಕ ಕಡಿಮೆಯಾಗಿದೆ.

ರೈತರು ಇ-ಕೆವೈಸಿ ಮಾಡಿಸಲು ಕರೆ :

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರದ 6 ಸಾವಿರ ರೂಪಾಯಿ ಮತ್ತು ರಾಜ್ಯ ಸರ್ಕಾರದ 4 ಸಾವಿರ ರೂಪಾಯಿ ಹಣವನ್ನು ರೈತರ ಖಾತೆಗೆ ಹಣವನ್ನು ಪಾವತಿಸಲು ತಾಲ್ಲೂಕಿ ನಲ್ಲಿ ಇಲ್ಲಿಯವರೆಗೆ 6600 ರೈತರು ಇ.ಕೆ.ವೈ.ಸಿ. ಮಾಡಿಸಿಲ್ಲ. ಈ ರೈತರು ಆದಷ್ಟು ಬೇಗ ಕೃಷಿ ಕಚೇರಿ ಗೆ ಅಥವಾ ನಾಡ ಕಚೇರಿಗೆ ಹೋಗಿ ಇ-ಕೆ.ವೈ. ಸಿ ನೋಂದಣಿ ಮಾಡಿಸುವಂತೆ ಸಹಾಯಕ ಕೃಷಿ ನಿರ್ದೇಶಕ ನಾರನಗೌಡ್ರು ತಿಳಿಸಿದ್ದಾರೆ.

error: Content is protected !!