ದಾವಣಗೆರೆ, ಜು.6- ರಾಜ್ಯದ ಕೊಳಗೇರಿ ಪ್ರದೇಶದ ನಿವಾಸಿಗಳ ಹಕ್ಕೊತ್ತಾಯದ ಸಭೆ ಕರೆಯುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನಗರದ ಸ್ಲಂ ಜನಾಂದೋಲನ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಮನವಿ ಸಲ್ಲಿಸಿ, ಸಚಿವರು ತಮ್ಮ ಅವಧಿಯಲ್ಲಿ ವಸತಿ ಹಕ್ಕು ಜಾರಿ ಮಾಡುವ ಮೂಲಕ ಸುಮಾರು 15 ಲಕ್ಷದಷ್ಟಿರುವ ವಸತಿ ರಹಿತ ಕುಟುಂಬಗಳಿಗೆ ಸೂರು ಒದಗಿಸಿಕೊಡಬೇಕು. ಸರ್ಕಾರದ ಭರವಸೆಯಂತೆ ವಸತಿ ಸಬ್ಸಿಡಿಯನ್ನು ಎಲ್ಲಾ ಬಡವರಿಗೆ 3.5ಲಕ್ಷಕ್ಕೆ ಹೆಚ್ಚಿಸಬೇಕು. ವಸತಿ ಹಕ್ಕು ಕಾಯಿದೆ ಜಾರಿಗೊಳಿಸಲು 2018ರಲ್ಲಿ ಸಲ್ಲಿಸಲಾಗಿರುವ ಸ್ಲಂ ಅಭಿವೃದ್ಧಿ ಕಾಯಿದೆ ಕರಡನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಕೊಳಗೇರಿ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು, ವಿಧಾನಸಭೆ ಅಧಿವೇಶನದ ನಂತರ ಕೊಳಗೇರಿ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಲು ಸಭೆ ಕರೆಯುವುದಾಗಿ ತಿಳಿಸಿದರು.
ಸ್ಲಂ ಜನರಿಗೆ ನಿರ್ಮಿಸುವ ವಸತಿಗಳ ಸಬ್ಸಿಡಿ ಏರಿಕೆ ಕುರಿತಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ಸಂಚಾಲಕ ಇಮ್ತಿಯಾಜ್, ಶೋಭಾ ಕಮತರ್, ಚಂದ್ರಮ್ಮ, ಧಾರವಾಡದ ರಸೂಲ್, ಚಿತ್ರದುರ್ಗದ ಟಿ.ಮಂಜಣ್ಣ, ದಾವಣಗೆರೆಯ ರೇಣುಕಾಯಲ್ಲಮ್ಮ, ಹೊಸಪೇಟೆಯ ವೆಂಕಮ್ಮ, ಬಳ್ಳಾರಿಯ ಶೇಖರ್ ಬಾಬು ಮತ್ತಿತರರು ಇದ್ದರು.