ಮಾದಿಗ ಸಮುದಾಯವನ್ನು ಅವಮಾನಿಸುವುದು ಸಲ್ಲದು

ದಾವಣಗೆರೆ, ಜು. 3-  ಒಳ ಮೀಸಲಾತಿ ನೀಡಿರುವುದರಿಂದ ಬಿಜೆಪಿ ಸೋಲು ಕಂಡಿದೆ ಎಂದು ಪಕ್ಷದ ಶಾಸಕರು, ಮಾಜಿ ಸಚಿವರು ಹೇಳಿಕೆ ನೀಡುವ ಮೂಲಕ ಮಾದಿಗ ಸಮುದಾಯವನ್ನು ಅವಮಾನಿ ಸುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಮಾದಿಗ ವೇದಿಕೆ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮಾಜದ ಮುಖಂಡ ಹನುಮಂತಪ್ಪ ಮಾತನಾಡಿ, ದುರಾಡಳಿತದಿಂದ ಬಿಜೆಪಿ ಸೋಲು ಕಂಡಿದೆ. ಇದನ್ನು ಸಮರ್ಥಿಸಿಕೊಳ್ಳಲು ರಾಜ್ಯದಲ್ಲಿ ಒಳ ಮೀಸಲಾತಿಯಿಂದ ಬಿಜೆಪಿ ಸೋತಿದೆ ಎಂದು ಸಭೆಗಳಲ್ಲಿ, ಮಾಧ್ಯಮದವರ ಮುಂದೆ ಹೇಳಿಕೊಳ್ಳುತ್ತಾ ಮಾದಿಗ ಸಮಾಜವನ್ನು ಹೀಯಾಳಿಸುವುದು ಖಂಡನೀಯ ಎಂದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮತ್ತೆ ಒಳಮೀಸಲಾತಿಯಿಂದ ಹೀನಾಯವಾಗಿ ಸೋಲಬೇಕಾಯಿತು ಎಂದು ಹೇಳಿಕೆ ನೀಡುತ್ತಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿಗೆ ಪ್ರತಿಭಟನೆ ನಡೆಸಿದರೂ ಈ ಬಗ್ಗೆ ಗಮನಹರಿಸದ ಬಿಜೆಪಿ, ಅವೈಜ್ಞಾನಿಕ ಸಮಿತಿ ರಚಿಸಿಕೊಂಡು ವರದಿ ತಿರುಚಿ ಕೇಂದ್ರಕ್ಕೆ ಕಳುಹಿಸಿರುವುದು ಚುನಾವಣೆ ಗಿಮಿಕ್. ಇದರಿಂದ ಒಳಮೀಸಲಾತಿಗೆ ಯಾವುದೇ ಪ್ರಯೋಜನವಾಗದು ಎಂದು ಹೇಳಿದರು.

ಬಿಜೆಪಿ ಶಾಸಕರು, ಮಾಜಿ ಸಚಿವರು ಮಾದಿಗ ಸಮಾಜವನ್ನು ಅವಮಾನಿಸುವುದನ್ನು ಕೈಬಿಡಬೇಕು. ಮಾದಿಗ ಸಮಾಜದ ಬಗ್ಗೆ ಮಾತನಾಡುವ ಮೊದಲು, ಐಪಿಎಸ್ ಅಧಿಕಾರಿ ಎಂ. ನಂಜುಂಡಸ್ವಾಮಿ ಬರೆದಿರುವ ಹೊಲೆಯರು, ಮಾದರು, ರಾಜರು ಎನ್ನುವ ಪುಸ್ತಕವನ್ನು ಓದಿ   ಮಾದಿಗ ಸಮುದಾಯದವರು ಯಾರು ಎಂದು ತಿಳಿದುಕೊಳ್ಳಲಿ ಎಂದರು.

ಮಾದಿಗ ಸಮುದಾಯದ ಬಗೆಗಿನ ಹೇಳಿಕೆ ಮತ್ತೆ ಪುನರಾವರ್ತನೆಯಾದರೆ, ಬಿಜೆಪಿಯ ಅವೈಜ್ಞಾನಿಕ ವರದಿಯ ಬಗ್ಗೆ ಸಮುದಾಯಕ್ಕೆ ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಮಾದಪ್ಪ, ತಿಪ್ಪೇರುದ್ರಪ್ಪ, ಆವರಗೆರೆ ಎಂ. ಚಂದ್ರಪ್ಪ ಕೊಪ್ಪದ್, ನಾಗರಾಜ್ ಉಪಸ್ಥಿತರಿದ್ದರು.

error: Content is protected !!