ವಿದ್ಯಾರ್ಥಿಯೂ ಉತ್ತಮ ಶಿಕ್ಷಕನನ್ನು ರೂಪಿಸಲು ಸಾಧ್ಯ

ವಿದ್ಯಾರ್ಥಿಯೂ ಉತ್ತಮ ಶಿಕ್ಷಕನನ್ನು ರೂಪಿಸಲು ಸಾಧ್ಯ

ಉಳ್ಳಾಲದಲ್ಲಿ ಜೆಜೆಎಂಎಂಸಿ ಗೈನಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶುಕ್ಲ ಎಸ್. ಶೆಟ್ಟಿ

ವೈದ್ಯಕೀಯ ರಂಗದಲ್ಲಿ  ವಿಶೇಷ ಸೇವೆ ಸಲ್ಲಿಸುತ್ತಿರುವ ದಾವಣಗೆರೆಯ ಜೆಜೆಎಂ ಕಾಲೇಜು ಆರ್ಥಡೆಕ್ಸ್ ಗೈನಕಾಲಜಿ  ವಿಭಾಗದ ಮುಖ್ಯಸ್ಥರಾದ   ಡಾ. ಶುಕ್ಲ ಎಸ್. ಶೆಟ್ಟಿ ಅವರೂ ಸೇರಿದಂತೆ ನಾಲ್ವರಿಗೆ  ಗೌರವ

ಉಳ್ಳಾಲ, ಜು. 3-  ಉತ್ತಮ ಶಿಕ್ಷಕ, ಉತ್ತಮ ವಿದ್ಯಾರ್ಥಿಯನ್ನು ಬೆಳೆಸಲು ಸಾಧ್ಯವಾದಲ್ಲಿ, ಉತ್ತಮ ವಿದ್ಯಾರ್ಥಿಯೂ ಉತ್ತಮ ಶಿಕ್ಷಕನನ್ನು ರೂಪಿಸಲು ಸಾಧ್ಯ ಎಂದು ದಾವಣಗೆರೆಯ ಜೆಜೆಎಂ ಕಾಲೇಜು ಆರ್ಥಡೆಕ್ಸ್ ಗೈನಕಾಲಜಿ  ವಿಭಾಗದ ಮುಖ್ಯಸ್ಥರಾದ ಡಾ. ಶುಕ್ಲ ಎಸ್. ಶೆಟ್ಟಿ ಅಭಿಪ್ರಾಯಿಸಿದರು.

ಉಳ್ಳಾಲದ ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆ ವತಿಯಿಂದ ಆವಿಷ್ಕಾರ ಸಭಾಂಗಣದಲ್ಲಿ ಜರುಗಿದ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯಕೀಯ ಸೇವೆಯಲ್ಲಿ ಹಲವು ವರ್ಷಗಳಿಂದ ಸೇವೆಗೈದ ಹಿರಿಯ ವೈದ್ಯರಿಗೆ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಪ್ರತಿದಿನ ನಾವೀನ್ಯತೆಗಳು ಎದುರಾಗುವುದರಿಂದ, ಕಿರಿಯ ವೈದ್ಯರು ಹಿರಿಯ ವೈದ್ಯರೊಂದಿಗಿನ ಚರ್ಚೆಯಲ್ಲಿ ಭಾಗವಹಿಸುವುದರಿಂದ ಕ್ಷೇತ್ರದಲ್ಲಿ  ಹೆಚ್ಚಿನ ಬದಲಾವಣೆ ಸಾಧ್ಯ. ಆ ಮೂಲಕ ರೋಗಿಗಳ ಸೇವೆಯಲ್ಲಿ ಗುಣಾತ್ಮಕತೆ ಕಾಣಬಹುದು ಎಂದು ಅವರು ಅಭಿಪ್ರಾಯಿಸಿದರು.

 ಹಿರಿಯ ವೈದ್ಯರನ್ನು ಸನ್ಮಾನಿಸಿ   ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ, ಬಡ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರ ಉತ್ತಮ ಸೇವೆಯನ್ನು ಬಯಸುತ್ತಾರೆ. ಕೋವಿಡ್ ಸಂದರ್ಭ ಬಹಳಷ್ಟು ಜನ ಆರ್ಥಿಕ  ತೊಂದರೆಯಿಂದ ನೋವು ಅನುಭವಿಸುವಂತಾಯಿತು. ಹಣ ಮುಖ್ಯವಾಗಿದ್ದರೂ ಸೇವೆಗೆ ಪ್ರಾಮುಖ್ಯತೆ ನೀಡುವುದು ವೈದ್ಯರಾದವರ ಗುಣವಾಗಬೇಕು ಎಂದು   ಕಿವಿಮಾತು ಹೇಳಿದರು.

 ನಿಟ್ಟೆ  ವಿವಿ ಸಹಕುಲಾಧಿಪತಿ ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಡಾ. ಬಿ.ಸಿ.ರಾಯ್ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ವೈದ್ಯರ ದಿನಾಚರಣೆಯಲ್ಲ.   ಅವರು ಮುಖ್ಯಮಂತ್ರಿಯಾಗಿ,  ಭಾರತ ರತ್ನ ಪಡೆದವರಾದ ಏಕೈಕ ವೈದ್ಯ.  ಈ ನಿಟ್ಟಿನಲ್ಲಿ ವೈದ್ಯನಾದವನು ಏನು ಮಾಡಬಹುದು ಅನ್ನುವುದನ್ನು ತೋರಿಸಿದ ವ್ಯಕ್ತಿತ್ವದ ಆಚರಣೆಯಾಗಿದೆ. ಅಂತಹ ಶ್ರೇಷ್ಟ ದಿನದಂದು ಹಣವೇ ಮುಖ್ಯವಲ್ಲ, ರೋಗಿಗಳ ಆರೈಕೆ ಮುಖ್ಯ ಎನ್ನುವ ಉದ್ದೇಶದಿಂದ ಕಾರ್ಯಾಚರಿಸಿದ ವೈದ್ಯರನ್ನು ಗೌರವಿಸಲಾಗಿದೆ ಎಂದರು.

ವೈದ್ಯಕೀಯ ರಂಗದಲ್ಲಿ  ವಿಶೇಷ ಸೇವೆ ಸಲ್ಲಿಸಿದ ದಾವಣಗೆರೆಯ ಜೆಜೆಎಂ ಕಾಲೇಜು ಆರ್ಥಡೆಕ್ಸ್ ಗೈನಕಾಲಜಿ  ವಿಭಾಗದ ಮುಖ್ಯಸ್ಥರಾದ   ಡಾ. ಶುಕ್ಲ ಎಸ್. ಶೆಟ್ಟಿ, ಬೆಳ್ತಂಗಡಿ ಉಜಿರೆಯ ಫಿಜಿಷಿಯನ್ ಡಾ. ಎನ್.ಬಾಲಕೃಷ್ಣ ಭಟ್, ಮಂಜೇಶ್ವರದ ಫಿಜಿಷಿಯನ್ ಡಾ.ಎಂ.ಜಯಪಾಲ್ ಶೆಟ್ಟಿ, ಉಳ್ಳಾಲದ ಫಿಜಿಷಿಯನ್  ಡಾ.ಎಂ.ಸದಾಶಿವ್ ಪೊಳ್ನಾಯ  ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಕುಲಪತಿ ಡಾ. ಎಂ.ಎಸ್ ಮೂಡಿತ್ತಾಯ,   ಸೇವಾ ವಿಭಾಗದ ಸಿಆರ್ಎಲ್‌ಎಂನ ಉಪಾಧ್ಯಕ್ಷ  ಡಾ.ಸತೀಶ್ ಕುಮಾರ್ ಭಂಡಾರಿ,   ಕುಲಸಚಿವ ಡಾ. ಹರ್ಷ ಹಾಲಹಳ್ಳಿ,  ವೈಸ್ ಡೀನ್ ಅಮೃತ್ ಮಿರಜ್‌ಕರ್  ಉಪಸ್ಥಿತರಿದ್ದರು.

ಡಾ.ಲಕ್ಷ್ಮಿ ಮಂಜೀರಾ ಎನ್., ಡಾ.ಸಂದೀಪ್ ರೈ, ಡಾ.ಅಭಿಜಿತ್ ಶೆಟ್ಟಿ, ಡಾ.ಶ್ರೀನಿವಾಸ್ ಭಟ್ ಸನ್ಮಾನಿತರ ಪರಿಚಯ ಓದಿದರು.

ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು.ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ ವಂದಿಸಿದರು. ನಿಶಾ ಶೆಟ್ಟಿ ಮತ್ತು ಸ್ವಾತಿ ರಾವ್ ನಿರೂಪಿಸಿದರು

error: Content is protected !!