ಶರಣ ಹಡಪದ ಅಪ್ಪಣ್ಣ ಜಾತ್ಯತೀತ ಸಮಾಜಕ್ಕೆ ಆದರ್ಶ

ಶರಣ ಹಡಪದ ಅಪ್ಪಣ್ಣ ಜಾತ್ಯತೀತ ಸಮಾಜಕ್ಕೆ ಆದರ್ಶ

ಜಗಳೂರಿನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್

ಜಗಳೂರು,ಜು.3- 12ನೇ ಶತಮಾನ ದಲ್ಲಿ ಬಸವಣ್ಣನವರ ಆಪ್ತರಾಗಿದ್ದ ನಿಜ ಸುಖಿ ಹಡಪದ ಅಪ್ಪಣ್ಣ ಜಾತ್ಯತೀತ ಸಮಾಜಕ್ಕೆ  ಆದರ್ಶವಾಗಿದ್ದಾರೆ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ನವರ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

 ಅನುಭವ ಮಂಟಪದಲ್ಲಿ ಬಸವಣ್ಣನವರು ಸಮಾಜವನ್ನು ತಿದ್ದಿ ತೀಡಲು ವಚನಕಾರರ ಸಾಮಾಜಿಕ ಕ್ರಾಂತಿ ಹಾಗೂ ಶಿವಶರಣ ವಚನ ಕಾರರ ಸಮಾನತೆ, ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನು ಪ್ರಪಂಚದ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸುತ್ತಿರುವುದು ಶ್ಲಾಘನೀಯ ಎಂದರು. ಪ್ರತಿಯೊಂದು ಸಮುದಾಯದ ಕುಲಕಸುಬಿನ ಬಗ್ಗೆ  ಕೀಳರಿಮೆ ಸಲ್ಲದು.ವೃತ್ತಿಯನ್ನು ಸಮಾಜ ಗೌರವಿಸಬೇಕು‌. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಹಡಪದ ಸಮಾಜ ಸಂಘದ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಡಪದ ಸಮಾಜಕ್ಕೆ ಸರ್ಕಾರ  ನಿಗಮ ಮಂಡಳಿ ಸ್ಥಾಪಿಸಿರುವುದು ಸ್ವಾಗತಾರ್ಹ ಎಂದರು.

ಸರ್ಕಾರ ಹಡಪದ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಕಲ್ಪಿಸಬೇಕು. ಕ್ಷೌರಿಕ ವೃತ್ತಿ ಅವಲಂಬಿಸಿರುವ ನಮ್ಮನ್ನು ಕೀಳರಿ ಮೆಯಿಂದ ಕಾಣಬಾರದು. ನಮ್ಮ ಸಮಾಜದ ವ್ಯಕ್ತಿ ಎದುರಿಗೆ ಆಗಮಿಸಿದರೆ ಅಪಶಕುನ ಎಂಬ ಮೂಢನಂಬಿಕೆಯ ದೃಷ್ಟಿಕೋನ ಬದಲಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ತೋಟಗಾರಿಕೆ ಇಲಾಖೆ‌ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ಸಮಾಜದ ಮುಖಂಡರಾದ ಷಡಕ್ಷರಿ, ತಿಪ್ಪೇಸ್ವಾಮಿ ಮುಂತಾದವರು ಇದ್ದರು.

error: Content is protected !!