ಭತ್ತದ ಬೆಳೆ ಹಾನಿ ವರದಿ ವಿಳಂಬಕ್ಕೆ ಆಕ್ರೋಶ

ಭತ್ತದ ಬೆಳೆ ಹಾನಿ ವರದಿ ವಿಳಂಬಕ್ಕೆ ಆಕ್ರೋಶ

ಹರಿಹರ ತಾಲ್ಲೂಕು ಕೃಷಿ ಇಲಾಖೆ ಕಚೇರಿ ಬಾಗಿಲು ಹಾಕಿ ರೈತರ ಪ್ರತಿಭಟನೆ

ಹರಿಹರ, ಜು. 3 – ಭತ್ತದ ಬೆಳೆಗೆ ಹವಾಮಾನ ವೈಪರೀತ್ಯದಿಂದ ಆಗಿರುವ ಹಾನಿಗೆ ಪರಿಹಾರ ನೀಡುವ ಕುರಿತು, ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸುವುದನ್ನು ವಿಳಂಬ ಮಾಡಿದ್ದಾರೆ ಎಂದು ಹೇಳಿರುವ ರೈತರು, ಕೃಷಿ ಇಲಾಖೆಯ ಕಚೇರಿ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ತಾಲ್ಲೂಕಿನ ಕಸಬಾ ಮತ್ತು ಮಲೇ ಬೆನ್ನೂರು, ನಂದಿತಾವರೆ, ಯಕ್ಕೆಗೊಂದಿ, ಕುಣೆ ಬೆಳಕೇರೆ, ಹಲಸಬಾಳು, ದೀಟೂರು, ಕೊಕ್ಕ ನೂರು, ಪಾಳ್ಯ, ಕೊಂಡಜ್ಜಿ, ಚಿಕ್ಕಬಿದರಿ, ದೇವರ ಬೆಳಕೇರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದೆ ಎಂದು ರೈತರು ಈ ಸಂದರ್ಭದಲ್ಲಿ ತಿಳಿಸಿದರು.

ಕಳೆದ ಜೂ.16ರಂದು ಯಕ್ಕೆಗೊಂದಿ ಗ್ರಾಮದ ಬಳಿ ಪ್ರತಿಭಟನೆ ನಡೆಸಿದಾಗ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಹಾನಿ ಪರಿಹಾರದ ವರದಿಯನ್ನು ಸರ್ಕಾರಕ್ಕೆ ಕಳಿಸುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ತಾಲ್ಲೂಕಿನ ಅಧಿಕಾರಿಗಳು ವರದಿ ನೀಡಿಲ್ಲ. ತಜ್ಞರು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕಾರಣ ನೀಡುತ್ತಿದ್ದಾರೆ ಎಂದು ರೈತ ಮುಖಂಡರಾದ ಪರಮೇಶ್ವರಪ್ಪ ಭಾನುವಳ್ಳಿ ಮತ್ತು ಶಂಭುಲಿಂಗಪ್ಪ ನಂದಿತಾವರೆ, ಎನ್.ಪಿ. ಶಿವಕುಮಾರ್, ಹಾಳೂರು ನಾಗರಾಜ್ ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗನಗೌಡ್ರು ಮಾತನಾಡಿ, ಒಂದು ಹಂತದಲ್ಲಿ ಪರಿಶೀಲನೆ ಪೂರೈಸಲಾಗಿದೆ. ಶಿವಮೊಗ್ಗದಿಂದ ತಜ್ಞರ ತಂಡ ಆಗಮಿಸಿ ವರದಿ ನೀಡಬೇಕಿದೆ. ಎರಡು, ಮೂರು ದಿನಗಳಲ್ಲಿ ಅವರು ಬರುವ ನಿರೀಕ್ಷೆ ಇದೆ ಎಂದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ ಕೃಷಿ ಇಲಾಖೆಯ ನಿರ್ದೇಶಕ ನಾಗನಗೌಡ್ರು ರವರು ಹಿರಿಯ ಅಧಿಕಾರಿಗಳ ನಿರ್ದೇಶನ ಏನು ಬಂದಿದೆ ಅದನ್ನು ಪಾಲಿಸಬೇಕಾಗುತ್ತದೆ. ಅವರು ಸರ್ವೆ ಮಾಡಿದ್ದಾರೆ. ಆದರೆ ವಿಜ್ಞಾನಿಗಳು ಬರುವುದು ತಡವಾಗಿದ್ದರಿಂದ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಈ ಕೂಡಲೇ ವಿಜ್ಞಾನಿಗಳ ಜೊತೆಗೆ ನಾನು ಕೂಡ ಮಾತನಾಡಿ, ಆದಷ್ಟು ಬೇಗ ವರದಿಯನ್ನು ಸಿದ್ದ ಮಾಡಿ ಕಳಿಸಿಕೊಡುವುದಕ್ಕೆ ಮುಂದಾಗುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಶಿಧರಯ್ಯ, ಶಂಭುಲಿಂಗಪ್ಪ ನಂದಿತಾವರೆ, ಬಸವರಾಜಪ್ಪ ಹಲಸಬಾಳು, ಹಾಳೂರು ನಾಗರಾಜ್, ಪರಮೇಶ್ವರಪ್ಪ ಕೆಂಚನಹಳ್ಳಿ, ರುದ್ರಮುನಿ ಹನಗವಾಡಿ, ಎನ್.ಪಿ.ಶಿವು,  ಪರಮೇಶ್ವರಪ್ಪ ಕೆಂಚನಹಳ್ಳಿ, ತಿಪ್ಪೇಸ್ವಾಮಿ, ಗದಿಗೆಪ್ಪ, ರಾಜಪ್ಪ, ಪ್ರಕಾಶ್ ಕೊಂಡಜ್ಜಿ, ಬಸವರಾಜ್, ನಂದೀಶ್ , ವಿ.ಎ ಹೇಮಂತ್, ಮತ್ತಿತರರು ಉಪಸ್ಥಿತರಿದ್ದರು.

error: Content is protected !!