ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಬಿ.ಕೆ. ರಂಗಪ್ಪ
ದಾವಣಗೆರೆ, ಜು. 2- ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಿಂತ ಕೌಶಲ್ಯವನ್ನು ಕಲಿಯಲು ಮುಂದಾಗಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿ ತೋರಬೇಕೆಂದು ದಾವಣಗೆರೆ ವಿವಿ ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಬಿ.ಕೆ. ರಂಗಪ್ಪ ಕರೆ ನೀಡಿದರು.
ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘ, ಎನ್ನೆಸ್ಸೆಸ್, ಯುವ ರೆಡ್‌ಕ್ರಾಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡುವುದನ್ನು ಬಿಟ್ಟು ಮೊಬೈಲ್ ನಲ್ಲಿ ಆಟಗಳನ್ನಾಡುತ್ತಿದ್ದಾರೆ. ಇದರಿಂದ ಸೋಲುವುದನ್ನು ಕಲಿಯಲಾಗದು. ಮೊಬೈಲ್ ಆಟಗಳು ಗೆಲುವನ್ನೇ ಬಯಸುತ್ತವೆ. ಇದರಿಂದ ಮಕ್ಕಳು ಬೇಗ ನಿರಾಸೆಗೆ, ಆಶಾ ಭಂಗಕ್ಕೆ ಒಳಗಾಗುತ್ತಾರೆ. ನಿಮ್ಮನ್ನು ನೀವೇ ಗುರುತಿಸಿಕೊಂಡು ನೀವೇ ಬೆಳೆಯಬೇಕು. ಪ್ರತಿ ಜೀವಿಗೂ ತನ್ನದೇ ಆದ ಸಾಮರ್ಥ್ಯ ಇರುತ್ತದೆ. ಅದರ ಸದ್ವಿನಿಯೋಗ ಮಾಡಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ಕಾಲೇಜಿಗೆ, ಪೋಷಕರಿಗೆ ಕೀರ್ತಿ ತರುವಂತೆ ಮನವಿ ಮಾಡಿದರು.
ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಾಭಕ್ಕಾಗಿ ನಾವು ವಿದ್ಯಾಸಂಸ್ಥೆಯನ್ನು ತೆರೆದಿಲ್ಲ. ಕೆೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ಣುಡಿಯಂತೆ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಸಂಸ್ಥೆಯನ್ನು ಮುನ್ನಡೆಸಲಾಗುವುದು ಎಂದು ಹೇಳಿದರು.
ಶ್ರೀ ವಿನಾಯಕ ಟ್ರಸ್ಟ್ ಟ್ರಸ್ಟಿ ಎಸ್.ಕೆ. ವೀರಣ್ಣ ಮಾತನಾಡಿ, ಸಂಬಳ ಮುಖ್ಯ ಅಲ್ಲ. ಬದ್ಧತೆಯಿಂದ ಕೆಲಸ ಮಾಡುವುದು ಮುಖ್ಯ. ಶಿಕ್ಷಣದ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಬೆಳೆಯಬಹುದು. ನಮ್ಮ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ. ವಿದ್ಯಾರ್ಥಿಗಳು ದೇಶ, ಸಮಾಜಕ್ಕೆ ಕೊಡುಗೆ ನೀಡುವ ಸತ್ಪ್ರಜೆಗಳಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಸಿ. ಗುರು ಪ್ರಾಸ್ತಾವಿಕವಾಗಿ ಮಾತನಾಡಿ, ಜುಲೈ 2 ಕ್ಕೆ ಕಾಲೇಜು 18 ವರ್ಷ ಪೂರೈಸುತ್ತದೆ. 64 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಕಾಲೇಜು, ಇದೀಗ 768 ವಿದ್ಯಾರ್ಥಿಗಳನ್ನು ಹೊಂದಿದೆ. ಸಕಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಕಾಲೇಜು ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಬಡವರು, ಹಿಂದುಳಿದ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಕೈಗೆಟಕುವ ಶುಲ್ಕ, ಅನುಭವಿ ಉಪನ್ಯಾಸಕ ವೃಂದ ಇದ್ದು, ಪೋಷಕರ ಆಸೆ ಈಡೇರಿಸಲು ಮುಂದಾಗುವಂತೆ ಸಲಹೆ ನೀಡಿದರು.
ಇದೇ ವೇಳೆ 2023 ರ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದ ಎನ್ನೆಸ್ಸೆಸ್ ಸ್ವಯಂ ಸೇವಕ ನಂದನ್ ಕುಮಾರ್ ಎಂ.ಹೆಚ್. ಇವರನ್ನು ಸನ್ಮಾನಿಸಲಾಯಿತು.
ಎಸ್‌ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖ ಉಪಸ್ಥಿತರಿದ್ದರು. ಶಿಫಾ ಅಂಜುಮ್ ಸ್ವಾಗತಿಸಿದರು. ಸಾಹಿತ್ಯ ನಿರೂಪಿಸಿದರು. ಪವಿತ್ರ ವಂದಿಸಿದರು.